ತಾಲ್ಲೂಕು ಕೇಂದ್ರ ಸ್ಥಾನವಾದ ನಗರದ ತಾಲ್ಲೂಕು ಕಚೇರಿಗೆ ವಿವಿಧ ಕೆಲಸಗಳ ನಿಮಿತ್ತ ಬರುವ ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ಸರ್ಕಾರಿ ಪ್ರೌಢಶಾಲೆಯ ಗೇಟ್ ಮುಂಭಾಗ ಪಾರ್ಕಿಂಗ್ ಮಾಡುವುದು ಹಾಗೂ ಶಾಲಾ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಗಟ್ಟಲು ಕ್ರಮ ವಹಿಸುವಂತೆ ಪೊಲೀಸ್ ಇಲಾಖೆಗೆ ತಹಶೀಲ್ದಾರ್ ಬಿ.ಎಸ್.ರಾಜೀವ್ ಸೂಚನೆ ನೀಡಿದ್ದಾರೆ.
ನಗರದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ ನೀಡಲು ಆಗಮಿಸಿದಾಗ ಪದವಿ ಪೂರ್ವ ಕಾಲೇಜಿನ ಕೆಲ ಉಪನ್ಯಾಸಕರು ಮಾಡಿದ ಮನವಿಯ ಮೇರೆಗೆ ಶಾಲಾ ಆವರಣವನ್ನು ವೀಕ್ಷಿಸಿ ಕೂಡಲೇ ಗೇಟ್ ಮುಂಬಾಗ ವಾಹನಗಳನ್ನು ನಿಲ್ಲಿಸುವುದನ್ನು ತಪ್ಪಿಸಲು ಬ್ಯಾರಿಕೇಡ್ ಆಳವಡಿಸುವುದು ಮತ್ತು ಶಾಲಾ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ತಡೆಯಲು ಹೋಂ ಗಾರ್ಡ್‌ನನ್ನು ನಿಯೋಜಿಸುವಂತೆ ಸೂಚಿಸಿದರು.
ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗಳ ಎಲ್ಲಾ ಪ್ರಕ್ರಿಯೆಗಳು ಇದೇ ಶಾಲಾ ಆವರಣದಲ್ಲಿ ನಡೆದಿದ್ದು ಈ ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ಶಾಲೆಯ ಕಾಂಪೌಂಡ್ ಕಲ್ಲುಗಳನ್ನು ಕಿತ್ತುಹಾಕಿರುವುದರಿಂದ ಪುಂಡು ಪೋಕರಿಗಳು ಶಾಲೆಗೆ ಬರುವ ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದಾರೆ. ಸಾಲದ್ದಕ್ಕೆ ಶಾಲೆಯ ಆವರಣದಲ್ಲಿ ನಾಗರಿಕರು ಮೂತ್ರ ವಿಸರ್ಜನೆ ಮಾಡುವುದರಿಂದ ಶಾಲೆಯ ಕೊಠಡಿಗಳವರೆಗೂ ದುರ್ವಾಸನೆ ಬರುತ್ತದೆ. ಈ ದುರ್ವಾಸನೆಯ ನಡುವೆ ಮಕ್ಕಳಿಗೆ ಪಾಠ ಮಾಡುವ ದುಸ್ಥಿತಿಯಲ್ಲಿ ಶಿಕ್ಷಕರಿದ್ದಾರೆ. ಕೂಡಲೇ ಮುರಿದುಹಾಕಿರುವ ಕಾಂಪೌಂಡ್ ಗೋಡೆ ದುರಸ್ತಿಗೊಳಿಸುವುದು ಮತ್ತು ಶಾಲೆಯ ಗೇಟ್ ಬಳಿ ಯಾವುದೇ ವಾಹನ ನಿಲ್ಲದಂತೆ ಕ್ರಮ ಜರುಗಿಸಿ ಎಂಬ ಶಿಕ್ಷಕರ ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಬಿ.ಎಸ್.ರಾಜೀವ್, ಪೊಲೀಸ್ ಇಲಾಖೆಯ ನೆರವಿನೊಂದಿಗೆ ಗೇಟ್ ಮುಂಬಾಗ ಬ್ಯಾರೀಕೇಡ್ ಅಳವಡಿಸುವ ಮೂಲಕ ವಾಹನ ನಿಲುಗಡೆಯನ್ನು ತೆರವುಗೊಳಿಸಿದರು.
ಸರ್ಕಾರಿ ಪ್ರೌಡಶಾಲೆ ಹಾಗೂ ಆವರಣದಲ್ಲಿರುವ ಸಮಸ್ಯೆಗಳನ್ನು ಒಂದೇ ಬಾರಿ ಬಗೆಹರಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಜರುಗಿಸಲಾಗುವುದು. ಶಾಲೆ ಹಾಗೂ ಶಾಲಾ ಆವರಣವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದರಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಶಾಲಾ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ಬಿಟ್ಟು ಪ್ರವಾಸಿ ಮಂದಿರ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಬಳಸಿಕೊಳ್ಳಬೇಕು
– ತಹಶೀಲ್ದಾರ್ ಬಿ.ಎಸ್.ರಾಜೀವ್