Yannuru, Sidlaghatta : ಮಣ್ಣಿನ ಋಣವನ್ನು ತೀರಿಸಲು ಎಂದಿಗೂ ಸಾಧ್ಯವಿಲ್ಲ. ಆದರೆ, ಋಣ ಭಾರವನ್ನು ಕಿಂಚಿತ್ತಾದರೂ ತೀರಿಸುವ ಪ್ರಯತ್ನ ಶ್ಲಾಘನೀಯವೆಂದು ಸಾಹಿತಿ ಸ.ರಘುನಾಥ ತಿಳಿಸಿದರು.
ತಾಲ್ಲೂಕಿನ ಯಣ್ಣೂರಿನಲ್ಲಿ ಲಕ್ಷ್ಮಮ್ಮ- ಬಿ.ನಾರಾಯಣ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಗೆ ಪೀಠೋಪಕರಣ, ಎಲ್ಲಾ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಮಕ್ಕಳು ಚಿಕ್ಕವರಿರುವಾಗಲೆ ಪೋಷಕರು ಅವರ ಕಿವಿಗಳಿಗೆ ಉತ್ತಮ ಕತೆ, ಕವಿತೆ, ದಾಸರ ಪದಗಳನ್ನು ಹಾಕಬೇಕು. ತಾಯಿಯಿಂದ ಮಕ್ಕಳಿಗೆ ಸಿಗುವ ಸಂಸ್ಕಾರ ಅಮೂಲ್ಯವಾಗಿದ್ದು, ಇದರಲ್ಲಿ ಲೋಪವಾಗಬಾರದು. ತಾನು ಹುಟ್ಟಿದ ಊರು, ತನ್ನ ಜತೆಯಲ್ಲಿರುವ ಜನರನ್ನು ಪ್ರೀತಿಸುವುದು ದೇಶ ಪ್ರೇಮದ ಮೊದಲ ಹಂತವೆಂದು ಬಣ್ಣಿಸಿದರು.
ಲಕ್ಷ್ಮಮ್ಮ-ಬಿ.ನಾರಾಯಣ್ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ, ಕೋಲಾರದ ದಂತ ವೈದ್ಯ, ಯೋಗ ಗುರುವೂ ಆದ ಡಾ.ಜನಾರ್ದನ್ ಅವರು ಮಾತನಾಡಿ, ತನ್ನ ತಂದೆ ಬಿ.ನಾರಾಯಣ್ ಅವರ 84ನೇ ಜನ್ಮದಿನದ ಪ್ರಯುಕ್ತ ಟ್ರಸ್ಟ್ ಮೂಲಕ ಸಾಮಾಜಿಕ ಸೇವಾ ಕಾರ್ಯಕ್ಕೆ ಮುಂದಾಗಿದ್ದೇವೆ. ಧಾರ್ಮಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳು ಟ್ರಸ್ಟ್ ನ ಆದ್ಯತಾ ವಲಯವಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮದ ಪ್ರತಿಭಾವಂತ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮಾಡುವುದಾಗಿ ಹೇಳಿದರು.
ಸರ್ಕಾರಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು. ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಂಜುನಾಥ್, ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ನಾಗವೇಣಿ ಅವರನ್ನು ಸನ್ಮಾನಿಸಲಾಯಿತು.
ಗ್ರಾ.ಪಂ ಸದಸ್ಯರಾದ ನಾಗರಾಜ್, ಭ್ರಮರಾಂಬ, ಎಸ್.ಡಿ.ಎಂ.ಸಿ ಅಧ್ಯಕ್ಷ ಮುನಿರಾಜು, ಶ್ರೀನಿವಾಸ್, ಚನ್ನರಾಯಪ್ಪ, ಚಿಕ್ಕವೀರಭದ್ರಪ್ಪ, ಗವೀರಭದ್ರಪ್ಪ, ಮುಖ್ಯೋಪಾಧ್ಯಾಯ ಮುನಿರಾಜು, ಟ್ರಸ್ಟ್ ನ ಎಲ್ಲಾ ಸದಸ್ಯರು, ಪೊಲೀಸ್ ಇಲಾಖೆಯ ನಾಗೇಶ್, ಉದ್ಯಮಿ ಸಂಜಯ್, ಜೆ.ಮಂಜುನಾಥ್, ರಾಜಣ್ಣ ಹಾಜರಿದ್ದರು.