Sidlaghatta : ಶಿಡ್ಲಘಟ್ಟ ನಗರದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಸವಲತ್ತುಗಳನ್ನು ಕಲ್ಪಿಸಲಾಗುವುದು. ಪರೀಕ್ಷೆ ಫಲಿತಾಂಶ ಉತ್ತಮವಾಗಿ ಬರಲು ಇಲ್ಲಿನ ಉಪನ್ಯಾಸಕರು ಮತ್ತಷ್ಟು ಶ್ರಮಿಸಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಲೇಜು ಅಭಿವೃದ್ದಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಫಲಿತಾಂಶ ಉತ್ತಮ ಗೊಳಿಸಬೇಕು. ಜೊತೆಗೆ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲಾ ಕಾಲೇಜುಗಳಿಗೆ ಸೇರಿಸುವಂತಹ ವಾತಾವರಣ ನಿರ್ಮಿಸಬೇಕು. ತಾಲ್ಲೂಕಿನ ಪ್ರೌಢಶಾಲೆಗಳು ಮತ್ತು ಕಾಲೇಜುಗಳ ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕೆ ತಂದರೆ ಸ್ಥಳದಲ್ಲಿಯೇ ಪರಿಹಾರವನ್ನು ಕಲ್ಪಿಸುವುದಾಗಿ ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯುತ್ ಸಂಪರ್ಕ, ಶಾಲೆಯ ಅಡಿಗೆ ಕೋಣೆಯಲ್ಲಿ ನೀರಿನ ಸಂಪ್ ಹಾಗೂ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಉರ್ದು ಶಿಕ್ಷಕರನ್ನು ನಿಯೋಜನೆ ಗೊಳಿಸುವುದು ಸರ್ಕಾರಿ ಶಾಲೆ ಹಳೆಯ ಕಟ್ಟಡ ಮೇಲ್ಚಾವಣಿಯನ್ನು ದುರಸ್ಥಿಗೊಳಿಸುವುದು ಹಾಗೂ ಸುಣ್ಣ, ಬಣ್ಣ ಬಳಿಸುವ ಬಗ್ಗೆ ಹಾಗೂ ತಾಲ್ಲೂಕು ಕಚೇರಿ ಹಾಗೂ ಉಪ ನೊಂದಣಾಧಿಕಾರಿಗಳ ಕಚೇರಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಗೇಟ್ ಬಳಿ ಬಿಡುವುದರಿಂದ ವಿದ್ಯಾರ್ಥಿಗಳು ಓಡಾಡಲು ತೊಂದರೆ ಆಗುತ್ತದೆ ಎಂದು ಮುಖ್ಯ ಶಿಕ್ಷಕಿ ಹಾಗೂ ಅಭಿವೃದ್ದಿ ಸಮಿತಿಯ ಸದಸ್ಯರಾದ ಮಂಜುಳ ಶಾಸಕರ ಗಮನಕ್ಕೆ ತಂದರು.
ಪ್ರತಿಕ್ರಿಯಿಸಿದ ಶಾಸಕರು ನಾನು ಜನರ ಆಶೀರ್ವಾದದಿಂದ ಈ ಕ್ಷೇತ್ರದ ಶಾಸಕನಾಗಿದ್ದೇನೆ. ನನ್ನ ಆದ್ಯ ಕರ್ತವ್ಯ ಈ ಕ್ಷೇತ್ರದ ಜನತೆಗೆ ಉತ್ತಮ ಆರೋಗ್ಯ ಮತ್ತು ಶಿಕ್ಷಣ ನೀಡುವುದು. ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕೆ ನೀವು ಏಕೆ ಮೊದಲೇ ತರಲಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಸಿ.ಬಿ.ಸಿ ಕಮಿಟಿಯ ಸದಸ್ಯರಾದ ಡಿ.ಎಂ.ಜಗದೀಶ್ವರ್, ಶ್ರೀನಾಥ್, ಲಕ್ಷ್ಮಣ್‌ಕುಮಾರ್, ಇಂತಿಯಾಜ್‌ಪಾಷಾ, ಪ್ರಾಂಶುಪಾಲ ಸಿ.ವಿ.ವೆಂಕಟಶಿವಾರೆಡ್ಡಿ, ಉಪನ್ಯಾಸಕರಾದ ಡಿ.ಲಕ್ಷ್ಮಯ್ಯ, ಶಿವಾರೆಡ್ಡಿ, ಎಚ್.ಸಿ. ಮುನಿರಾಜು, ಶ್ರೀಕೃಷ್ಣಪರಮಾತ್ಮ, ಚಂದ್ರು, ಅರ್ಚನ ಹಾಜರಿದ್ದರು.