Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವುದೇ ಪೂರ್ವಾಪರ ವಿವರ ತಿಳಿಯದ ರೋಗಿಯೊಬ್ಬನನ್ನು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ (Government Hospital Doctors & Staff) ತಾವುಗಳೇ ಪೋಷಕರಂತೆ ನಾಲ್ಕಾರು ದಿನ ವಿಶೇಷ ಚಿಕಿತ್ಸೆ, ಆಹಾರ, ನೀರು, ಬಟ್ಟೆ ನೀಡುತ್ತಾ ಮಾನವೀಯತೆ ಮೆರೆದಿದ್ದಾರೆ.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿ ಅಪಘಾತಕ್ಕೆ ತುತ್ತಾಗಿ ಸಾರ್ವಜನಿಕರ ಸಹಕಾರದೊಂದಿಗೆ ಆಸ್ವತ್ರೆಗೆ ಈ ವ್ಯಕ್ತಿ ದಾಖಲಾಗಿದ್ದಾರೆ. ತಲೆಗೆ ಪೆಟ್ಟು ಬಿದ್ದಿರುವ ಈ ರೋಗಿಯ ಬಗ್ಗೆ ಯಾವುದೇ ವಿವರಗಳು ಕಂಡುಬರುತ್ತಿಲ್ಲ. ಈ ರೋಗಿಯನ್ನು ಪುರುಷರ ವಾರ್ಡ್ ನಲ್ಲಿ ಪ್ರತ್ಯೇಕವಾಗಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗಿದೆ.
ಈ ರೋಗಿಯ ತಲೆಗೆ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ರೋಗಿಯ ಚಟುವಟಿಕೆಗಳು ಮಾನಸಿಕ ರೋಗಿಯಂತೆ ಕಂಡುಬರುತ್ತಿದೆ. ವೈದ್ಯರು ಗುಣಮಟ್ಟ ಚಿಕಿತ್ಸೆ ಕೊಡುತ್ತಿದ್ದರು ರೋಗಿಯೂ ಸಹಕಾರಿಸುತ್ತಿಲ್ಲವಾದ್ದರಿಂದ ಈ ವ್ಯಕ್ತಿಯ ಸಂಬಂಧಿಗಳಾಗಲಿ ಅಥವಾ ಪರಿಚಸ್ಥರು ಆಗಲಿ ಈ ರೋಗಿಯ ಜೊತೆ ಇದ್ದರೆ, ನಾವು ಇನ್ನು ಹೆಚ್ಚಿನ ಚಿಕಿತ್ಸೆ ಕೊಡಬಹುದು ಎನ್ನುತ್ತಾರೆ ವೈದ್ಯರು.
“ಯಾರೇ ಬಂದರೂ ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯ. ಈ ವ್ಯಕ್ತಿ ಮಾನಸಿಕ ಅಸ್ವಸ್ಥನಿದ್ದು, ಕುಟುಂಬದ ಬಗ್ಗೆ ತಿಳಿಯದ ಕಾರಣ, ನಾವು ಪೊಲೀಸರು ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಗೆ ಮನವಿ ಮಾಡಿದ್ದೆವು. ಗೊರಮಡಗುವಿನಲ್ಲಿರುವ ಜೀವನಜ್ಯೋತಿ ಆಶ್ರಮದ ಓಬಣ್ಣ ಅವರು ಬಂದು ಕರೆದುಕೊಂಡು ಹೋಗಲಿದ್ದಾರೆ. ಅಲ್ಲಿ ಅವರಿಗೆ ಆರೈಕೆ ಮಾಡುವರು. ಏನಾದರೂ ಚಿಕಿತ್ಸೆ ಅವಶ್ಯಕವಿದ್ದಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಕೊಡುವುದಾಗಿ ಹೇಳಿದ್ದೇವೆ” ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಂಜಾನಾಯಕ್ ತಿಳಿಸಿದರು.
“ಅನಾಥವಾಗಿದ್ದ ಈ ರೋಗಿಯನ್ನು ನಾವೇ ನೋಡಿಕೊಳ್ಳುತ್ತೇವೆ, ಆರೈಕೆ ಮಾಡುತ್ತೇವೆ. ಪ್ರಸ್ತುತ ಕಾಲಘಟ್ಟದಲ್ಲಿ ಇಂತಹ ಮನಕಲಕುವ ಘಟನೆಗಳು ಹೆಚ್ಚುಗುತ್ತಿವೆ. ಮಾನವೀಯತೆಯನ್ನು ಮರೆಯಬಾರದು” ಎಂದು ಜೀವನಜ್ಯೋತಿ ಆಶ್ರಮದ ಓಬಣ್ಣ ಮುಖ್ಯಸ್ಥ ತಿಳಿಸಿದರು.