Sidlaghatta : ಶಿಡ್ಲಘಟ್ಟ ನಗರದ ಸರ್ವಜನಿಕ ಆಸ್ಪತ್ರೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ ಹಾಗೂ ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಮಂಜ ನಾಯಕ್ ಅವರು ಸಂಭವನೀಯ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ, “ಚೀನಾದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಜಾಗತಿಕ ಮಟ್ಟದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸರ್ಕಾರಿ ಸೂಚನೆಯಂತೆ ನಾವುಗಳೂ ಸರ್ವಸನ್ನದ್ಧರಾಗಿದ್ದೇವೆ” ಎಂದರು.
ಆಕ್ಸಿಜನ್ ಸಿಲಿಂಡರ್‌ಗಳು, ವೆಂಟಿಲೇಟರ್‌ಗಳು ಮತ್ತು ಮಾನವ ಸಂಪನ್ಮೂಲಗಳನ್ನು ಒಳಗೊಂಡಂತೆ ಆಸ್ಪತ್ರೆಯ ಮೂಲಸೌಕರ್ಯಗಳ ವ್ಯವಸ್ಥೆ ಮಾಡಿಕೊಂಡಿದ್ದೇವೆ. 50 ಆಮ್ಲಜನಕ ವ್ಯವಸ್ಥೆಯಿರುವ ಹಾಸಿಗೆಗಳು, ಹತ್ತು ಹಾಸಿಗೆಗಳುಳ್ಳ ಐ.ಸಿ.ಯು, 8 ಪ್ರತ್ಯೇಕ ವಾಸದ ಹಾಸಿಗೆಗಳು, ಐದು ವೆಂಟಿಲೇಟರುಗಳು, ಮಕ್ಕಳಿಗಾಗಿ ಪ್ರತ್ಯೇಕ ಹಾಸಿಗೆಗಳು, ರಕ್ತ ತಪಾಸಣೆಗಾಗಿ ಲ್ಯಾಬ್ ವ್ಯವಸ್ಥೆ, 94 ಆಮ್ಲಜನಕ ಸಿಲಿಂಡರುಗಳಲ್ಲಿ 80 ತುಂಬಿವೆ. ವೈದ್ಯರು ಹಾಗೂ ದಾದಿಯರಿಗೆ ತರಬೇತಿ ಸಹ ನೀಡಲಾಗಿದೆ. ಆಸ್ಪತ್ರೆ ಆವರಣದಲ್ಲಿನ ಆಮ್ಲಜನಕ ಉತ್ಪಾದಕ ಘಟಕ ಸುಸ್ಥಿತಿಯಲ್ಲಿದೆ ಎಂದು ಹೇಳಿದರು.
ಸಂಭವನೀಯ ಸೋಂಕು ರೋಗ ನಿಯಂತ್ರಿಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಮಾಲೋಚನೆ ನಡೆಸಿದ್ದು, ಸೋಂಕಿತರಿಗಾಗಿ ಪ್ರತ್ಯೇಕ ವಾರ್ಡ್ ಮತ್ತು ಹಾಸಿಗೆಗಳನ್ನು ಮೀಸಲಿಡುವ ಕೆಲಸವನ್ನು ಮಾಡಿದ್ದೇವೆ ಎಂದರು.