Home News ನಿಶ್ಚಿತ ಪಿಂಚಣಿ ಆಗ್ರಹಿಸಿ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಹೋರಾಟ

ನಿಶ್ಚಿತ ಪಿಂಚಣಿ ಆಗ್ರಹಿಸಿ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಹೋರಾಟ

0
Sidlaghatta Government Employees Fixed Pension Strike

Sidlaghatta : ದೇಶದ ವಿವಿಧ ರಾಜ್ಯಗಳಲ್ಲಿ ನೂತನ ಪಿಂಚಣಿ ವ್ಯವಸ್ಥೆಯನ್ನು ಹಿಂಪಡೆದು ಈ ಹಿಂದಿನ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಈ ಬಗ್ಗೆ ಸುಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ ಎನ್‌ಪಿಎಸ್ ನೌಕರರಿಗೆ ಅನ್ಯಾಯ ಮಾಡುತ್ತಿದೆ ಎಂದು ಎನ್‌ಪಿಎಸ್ ನೌಕರರ ಸಂಘದ ತಾಲ್ಳೂಕು ಅಧ್ಯಕ್ಷ ವಿ.ಎನ್.ಗಜೇಂದ್ರ ಆರೋಪಿಸಿದರು.

ನಿಶ್ಚಿತ ಪಿಂಚಣಿ ಯೋಜನೆಗಾಗಿ ಆಗ್ರಹಿಸಿ ಎನ್‌ಪಿಎಸ್ ನೌಕರರಿಂದ ಬೆಂಗಳೂರು ಫ್ರೀಡಂಪಾರ್ಕ್ ನಲ್ಲಿ ಹಮ್ಮಿಕೊಂಡಿರುವ ಮಾಡು ಇಲ್ಲವೇ ಮಡಿ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಭಾಗವಹಿಸಲು ತಾಲ್ಲೂಕಿನಿಂದ 6 ಬಸ್ ಗಳಲ್ಲಿ ಸುಮಾರು 500 ಕ್ಕೂ ಹೆಚ್ಚು ಮಂದಿ ಸರ್ಕಾರಿ ನೌಕರರು ಸೋಮವಾರ ಬೆಳಗ್ಗೆ ಕೋಟೆ ವೃತ್ತದಿಂದ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ನೂತನ ಪಿಂಚಣಿ ವ್ಯವಸ್ಥೆ ಹಿಂಪಡೆದು ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಕಳೆದ ಕೆಲ ವರ್ಷಗಳಿಂದ ಬೇಡಿಕೆಯಿಡುತ್ತಿದ್ದರೂ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿದೆ. ಬಹುದಿನಗಳ ಬೇಡಿಕೆ ಈಡೇರಿಸುವ ಕುರಿತಂತೆ ಸರ್ಕಾರದ ಸುಳ್ಳು ಭರವಸೆಗಳಿಂದ ಬೇಸತ್ತು ಬೆಂಗಳೂರಿನ ಫ್ರೀಡಂ ಪಾರ್ಕಿನ ಆವರಣದಲ್ಲಿ ಮಾಡು ಇಲ್ಲವೇ ಮಡಿ ಅನಿರ್ದಿಷ್ಟ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುವುದಾಗಿ ಹೇಳಿದರು.

ನಿಶ್ಚಿತ ಪಿಂಚಣಿ ಯೋಜನೆಯಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ನೌಕರರಿಗೆ ಸೇವಾವಧಿಯಲ್ಲಿ ತಾವು ಪಡೆಯುತ್ತಿದ್ದ ಸಂಬಳದ ಅರ್ಧದಷ್ಟು ಪಿಂಚಣಿ ಬರುತ್ತಿತ್ತು. ನೂತನ ಪಿಂಚಣಿ ಯೋಜನೆಯಿಂದ ನಿವೃತ್ತಿಯಾದ ನೌಕರರಿಗೆ ಕೇವಲ ಎರಡು, ಮೂರು ಸಾವಿರ ರೂ ಗಳಷ್ಟು ಪುಡಿಗಾಸು ಮಾತ್ರ ಬರುತ್ತದೆ. ಎನ್‌ಪಿಎಸ್ ಖಾತೆಯ ಶೇ 50 ರಷ್ಟು ಹಣದಲ್ಲಿ ಸರ್ಕಾರ ಷೇರುಗಳನ್ನು ಖರೀದಿಸುವ ಮೂಲಕ ಎನ್‌ಪಿಎಸ್ ನೌಕರರ ಹಣವನ್ನು ಜೂಜು ಆಡಲು ಬಳಸುತ್ತಿದೆ ಎಂದರು. ಈ ಯೋಜನೆ ಷೇರು ಮಾರುಕಟ್ಟೆ ಆಧಾರಿತ ಯೋಜನೆಯಾಗಿದ್ದು ಈಗಾಗಲೇ ಕೊರೊನಾ ಹಿನ್ನಲೆಯಲ್ಲಿ ಷೇರು ಮಾರುಕಟ್ಟೆ ಹೊಡೆತಕ್ಕೆ ಸಿಲುಕಿದ ಎನ್‌ಪಿಎಸ್ ನೌಕರರು ತಮ್ಮ ಖಾತೆಗಳಿಂದ 50 ರಿಂದ 80 ಸಾವಿರದವರೆಗೂ ಕಳೆದುಕೊಂಡಿದ್ದಾರೆ ಎಂದರು.

ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಹಲವಾರು ಚಳುವಳಿ, ಹೋರಾಟಗಳು ಮಾಡಲಾಗಿದೆಯಾದರೂ ನಮ್ಮ ಬೇಡಿಕೆಯನ್ನು ನಿರ್ಲಕ್ಷಿಸುತ್ತಿರುವ ಸರ್ಕಾರದ ಗಮನ ಸೆಳೆಯುವುದು ಸೇರಿದಂತೆ ಬೆಳಗಾವಿಯ ವಿದಾನಸಭೆ ಅಧಿವೇಶನದಲ್ಲಿ ನಮ್ಮ ಬೇಡಿಕೆತನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸಲಾಗುವುದು. ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಘೋಷಣೆ ಆಗುವವರೆಗೂ ನಮ್ಮ ಹೋರಾಟ ನಿಲ್ಲುವದಿಲ್ಲ ಎಂದು ನುಡಿದರು.

ಎನ್‌ಪಿಎಸ್ ನೌಕರರ ಸಂಘದ ಕಾರ್ಯದರ್ಶಿ ನರಸಿಂಹರಾಜು ಮಾತನಾಡಿ ಜೀವನದ ಸಂಧ್ಯಾ ಕಾಲದಲ್ಲಿ ಸರ್ಕಾರಿ ನೌಕರರು ನೆಮ್ಮದಿಯ ಜೀವನ ನಡೆಸುವಂತಾಗಲು ಬೆಂಗಳೂರಿನ ಫ್ರೀಡಂ ಪಾರ್ಕಿನ ಆವರಣದಲ್ಲಿ ನಡೆಯುವ ಹೋರಾಟದಲ್ಲಿ ಭಾಗವಹಿಸಲು ನಮ್ಮ ತಾಲ್ಲೂಕು ಕೇಂದ್ರದಿಂದ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಹೋಗಿ ಹೋರಾಟ ನಡೆಸುತ್ತೇವೆ ಎಂದರು.

ತಾಲ್ಲೂಕು ಎನ್ ಪಿ ಎಸ್ ನೌಕರರ ಸಂಘದ ಕಾರ್ಯದರ್ಶಿ ನರಸಿಂಹರಾಜು, ಶಿವಶಂಕರ್, ಶಿಕ್ಷಣ ಸಂಯೋಜಕ ಭಾಸ್ಕರ್ ಗೌಡ, ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶ ಮೂರ್ತಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷ ಬೈರಾರೆಡ್ಡಿ, ಡಿಪಿಎಆರ್ ಇಲಾಖೆ, ಆರೋಗ್ಯ ಇಲಾಖೆ ಕಂದಾಯ ಇಲಾಖೆ ಮತ್ತಿತರ ಇಲಾಖೆಗಳ ನೌಕರರು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version