Sidlaghatta : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ರೈತ, ಕಾರ್ಮಿಕ, ಯುವಜನ ವಿರೋಧಿ ನೀತಿಗಳನ್ನು ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಾರ್ಮಿಕ ಸಂಘನೆಗಳ ಜಂಟಿ ಕ್ರಿಯಾಸಮಿತಿ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇದೇ ನ 26 ರಿಂದ ನ 28 ರವರೆಗೆ 72 ಗಂಟೆಗಳ ಕಾಲ ಬೃಹತ್ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದು ತಾಲ್ಲೂಕಿನಿಂದ ಹೆಚ್ಚಿನ ರೈತರು ಭಾಗವಹಿಸಿ ಧರಣಿಯನ್ನು ಯಶಶ್ವಿಗೊಳಿಸಬೇಕು ಎಂದು ರಾಜ್ಯ ರೈತ ಸಂಘ ಹಾಗು ಹಸಿರುಸೇನೆ (ಪುಟ್ಟಣ್ಣಯ್ಯ ಬಣ) ಯ ಜಿಲ್ಲಾ ಉಪಾಧ್ಯಕ್ಷ ಟಿ.ಕೆ.ಅರುಣ್‌ಕುಮಾರ್ ಮನವಿ ಮಾಡಿದರು.
ಧರಣಿಯ ಹಿನ್ನಲೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ರೈತರು ಸೇರಿದಂತೆ ಕಾರ್ಮಿಕ ಸಂಘಟನೆಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತರಿಗೆ, ಕಾರ್ಮಿಕರಿಗೆ ಕೊಟ್ಟ ಭರವಸೆಯನ್ನು ಈಡೇರಿಸದೇ ಮಾತು ತಪ್ಪಿರುವ ಕೆಂದ್ರ ಹಾಗು ರಾಜ್ಯ ಸರ್ಕಾರಗಳ ವಿರುದ್ದ ಮೂರು ದಿನಗಳ ಕಾಲ ಧರಣಿ ನಡೆಸಲಿದ್ದು ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಧರಣಯಲ್ಲಿ ಭಾಗವಹಿಸಲಿದ್ದಾರೆ.
ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ರೈತರ ನಿರಂತರ ಹೋರಾಟ ಹಾಗು ನೂರಾರು ರೈತರು ಹುತಾತ್ಮರಾದ 13 ತಿಂಗಳ ನಂತರ ಕಾಯ್ದೆಗಳನ್ನು ಹಿಂಪಡೆದ ಸರ್ಕಾರ ಆ ಸಂದರ್ಭದಲ್ಲಿ ಕಾನೂನಾತ್ಮಕ ಬೆಂಬಲ ಬೆಲೆ ಕಾಯ್ದೆ ತರುವುದು ಹಾಗು ವಿದ್ಯುತ್ ಖಾಸಗೀಕರಣ ಕಾಯ್ದೆ ಕೈ ಬಿಡುವ ಭರವಸೆ ನೀಡಿತ್ತು ಆದರೆ ಈವರೆಗೂ ಇದ್ಯಾವುದೂ ಜಾರಿಯಾಗಿಲ್ಲ ಹಾಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ಬೃಹತ್ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಮಾತನಾಡಿ, ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ಇಡೀ ದೇಶದಲ್ಲಿ ಮೊದಲ ಭಾರಿಗೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಜಾರಿಗೆ ತಂದಿತ್ತು. ಇದರ ವಿರುದ್ದ ಹೋರಾಟ ಆರಂಭವಾದಾಗ ವಿರೋಧ ಪಕ್ಷದ ನಾಯಕಾರಾಗಿದ್ದ ಇಂದಿನ ಸಿಎಂ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೋರಾಟಕ್ಕೆ ಬೆಂಬಲ ಸೂಚಿಸಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಭರವಸೆ ನೀಡಿದ್ದರು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದು ಆರು ತಿಂಗಳಾದರೂ ಈವರೆಗೂ ಯಾವುದೇ ಕ್ರಮ ಜರುಗಿಸದ ರಾಜ್ಯ ಸರ್ಕಾರದ ವಿರುದ್ದವೂ ಹೋರಾಟ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಾರುತಿ, ಗೌರವಾಧ್ಯಕ್ಷ ಕೋಟೆ ಚನ್ನೇಗೌಡ, ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ವಿಸ್ಡಂ ನಾಗರಾಜ್, ಕಾರ್ಮಿಕ ಸಂಘಟನೆಯ ಫಯಾಜ್, ಮಹಿಳಾ ಸಂಘಟನೆಯ ಮಧುಲತಾ, ಪ್ರದೀಪ್, ಮತ್ತಿತರರು ಹಾಜರಿದ್ದರು.