Sadali, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಭಾಗದ ಧೀಮಂತ ನಾಯಕರಾಗಿದ್ದ ಆವುಲರೆಡ್ಡಿ ಅವರು ಕ್ಷೇತ್ರದ ಶಾಸಕರಾಗಿದ್ದವರು. ಅವರ ಕೊಡುಗೆ ಈ ಕ್ಷೇತ್ರಕ್ಕೆ ಅಪಾರವಾಗಿದ್ದು ಅವರನ್ನು ಸ್ಮರಿಸುವುದು ನಮ್ಮ ನಿಮ್ಮ ಕರ್ತವ್ಯ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಸಾದಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಬೆಂಗಳೂರಿನ ಈಸ್ಟ್ ಪಾಯಿಂಟ್ ಆಸ್ಪತ್ರೆ ಹಾಗೂ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ನೆರವಿನೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಭಾಗವು ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿದೆ. ಮುಖ್ಯವಾಗಿ ಶೈಕ್ಷಣಿಕವಾಗಿ, ಆರೋಗ್ಯ ಕ್ಷೇತ್ರ ಹಾಗೂ ಮೂಲ ಸೌಕರ್ಯಗಳಲ್ಲಿ ಸಾಕಷ್ಟು ಅಭಿವೃದ್ದಿ ಆಗಬೇಕಿದ್ದು ಈ ನಿಟ್ಟಿನಲ್ಲಿ ಅಗತ್ಯವಾದ ಎಲ್ಲ ನೆರವನ್ನು ನೀಡುವುದಾಗಿ ಭರವಸೆ ನೀಡಿದರು.
ಕಳೆದ ಮೂರು ತಿಂಗಳ ಹಿಂದೆ ಗಂಜಿಗುಂಟೆಯಲ್ಲಿ ಹೊಸಕೋಟೆಯ ಎಂವಿಜೆ ಆಸ್ಪತ್ರೆಯ ನೆರವಿನಿಂದ ಬೃಹತ್ ಆರೋಗ್ಯ ಶಿಬಿರ ನಡೆಸಿದ್ದು 650ಕ್ಕೂ ಹೆಚ್ಚು ಮಂದಿ ಪ್ರಯೋಜನ ಪಡೆದುಕೊಂಡಿದ್ದರು, ಇದೀಗ ಸಾದಲಿಯಲ್ಲಿ ಈಸ್ಟ್ ಪಾಯಿಂಟ್ ಆಸ್ಪತ್ರೆಯ ನೆರವಿನಿಂದ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದೇವೆ.
ಮುಂದಿನ ದಿನಗಳಲ್ಲಿ ತಾಲ್ಲೂಕಿನ ಉಳಿದ ಎಲ್ಲ ಹೋಬಳಿ ಕೇಂದ್ರಗಳಲ್ಲೂ ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲು ಅಗತ್ಯ ಸಿದ್ದತೆಗಳನ್ನು ಈಗಾಗಲೆ ನಡೆಸಿದ್ದು ಈ ಕ್ಷೇತ್ರದ ಜನರಿಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ ನೀಡುವುದು ನಮ್ಮ ಬದುಕಿನ ಉದ್ದೇಶವಾಗಿದ್ದು ಅದಕ್ಕೆ ಈ ಕ್ಷೇತ್ರದ ಎಲ್ಲರ ಸಹಕಾರ ಮುಖ್ಯ ಎಂದರು.
ಇದೀಗ ಈಸ್ಟ್ ಪಾಯಿಂಟ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ವೇಣುಗೋಪಾಲ್ ಅವರು ಅವರ ತಂದೆ ವಿ.ಎನ್.ಮಾಸ್ಟರ್ ಅವರ ಸ್ಮರಣಾರ್ಥ ಈ ಆರೋಗ್ಯ ಶಿಬಿರಕ್ಕೆ ಕೈ ಜೋಡಿಸಿದ್ದು ಈ ಶಿಬಿರದಲ್ಲಿ ತಪಾಸಣೆ ಮಾಡಿ ಶಸ್ತ್ರಚಿಕಿತ್ಸೆ ಅಥವಾ ಹೆಚ್ಚಿನ ಚಿಕಿತ್ಸೆ ಅಗತ್ಯ ಬಿದ್ದವರನ್ನು ಆಸ್ಪತ್ರೆಯ ವಾಹನದಲ್ಲೆ ಸೋಮವಾರ ಬೆಂಗಳೂರಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮತ್ತೆ ವಾಪಸ್ ಕರೆ ತರಲಾಗುವುದು. ಅಗತ್ಯವಿರುವ ಎಲ್ಲರೂ ಈ ಶಿಬಿರದ ಉಪಯೋಗವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ಡಾ.ವೇಣುಗೋಪಾಲ್ ಅವರ ನೇತೃತ್ವದಲ್ಲಿ ಈಸ್ಟ್ ಪಾಯಿಂಟ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯು ಶಿಬಿರದಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿ ಔಷದೋಪಚಾರ ನಡೆಸಿದರು.
ತಾ.ಪಂ. ಇಒ ಜಿ.ಮುನಿರಾಜ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ಡಾ.ವೇಣುಗೋಪಾಲ್, ಸಿ.ಶಿ.ಪಿ.ಒ ನವತಾಜ್, ತಾದೂರು ರಘು, ಬಂಕ್ ಮುನಿಯಪ್ಪ, ಆರೋಗ್ಯ ನಿರೀಕ್ಷಕ ದೇವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಎಂ.ಶಶಿಕಲಾ ಸುರೇಶ್, ಸಾದಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮುನಿರಾಜು, ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಸೂಯಮ್ಮ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಜ್ಯೋತಿ ಎಸ್.ಗದಗ್, ಶಿವಾರೆಡ್ಡಿ, ಸದಾಶಿವ, ಅಶ್ವತ್ಥರೆಡ್ಡಿ, ಆರ್.ಎ.ಉಮೇಶ್, ಕೃಷ್ಣಾರೆಡ್ಡಿ, ಮೇಲೂರು ಶ್ರೀನಿವಾಸ್, ಕೊತ್ತನೂರು ಲಕ್ಷ್ಮೀಪತಿ, ಇರಗಪ್ಪನಹಳ್ಳಿ ಪ್ರಕಾಶ್ ಹಾಜರಿದ್ದರು.