News

ಮೇವಿನ ಕೊರತೆ: ನೀರಾವರಿ ಸೌಲಭ್ಯದ ರೈತರಿಗೆ ಮೇವಿನ ಬೀಜದ ಮಿನಿ ಕಿಟ್ ವಿತರಣೆ

Sidlaghatta fodder seed mini kits distributed to farmers by Joint Director S S Abeed

Sidlaghatta : ಮೇವಿನ ಕೊರತೆ ನೀಗಿಸಲು ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಪಶುಪಾಲನಾ ಇಲಾಖೆಯಿಂದ ಮೇವಿನ ಬೀಜದ ಮಿನಿ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ರೈತರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಕಿಟ್‌ಗಳನ್ನು ಪಡೆದು, ತಮ್ಮ ಜಮೀನಿನಲ್ಲಿ ಮೇವು ಬೆಳೆದು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಎಸ್. ಅಬೀದ್ ಮನವಿ ಮಾಡಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ 2026–27ನೇ ಸಾಲಿನ ಮೇವಿನ ಬೀಜದ ಮಿನಿ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಮೇವಿನ ಕೊರತೆ ಏಕೆ?

‘ಈ ವರ್ಷ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಜಾನುವಾರುಗಳಿಗೆ ಹಸಿರು ಮೇವಿನ ಅಭಾವ ಎದುರಾಗಿದೆ. ಮಳೆಯ ಕೊರತೆಯಿಂದ ಅನೇಕ ರೈತರು ಜಮೀನುಗಳಲ್ಲಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಮೇವಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ’ ಎಂದು ತಿಳಿಸಿದರು.

‘ಕಳೆದ ವರ್ಷ ದಾಸ್ತಾನು ಮಾಡಿಟ್ಟಿದ್ದ ಒಣಮೇವನ್ನು ರೈತರು ಬಳಸುತ್ತಿದ್ದು, ಈಗ ಅದರ ಸಂಗ್ರಹವೂ ಕಡಿಮೆಯಾಗುತ್ತಿದೆ. ಆದರೆ, ಕೊಳವೆಬಾವಿ ನೀರಾವರಿ ಸೌಲಭ್ಯ ಹೊಂದಿರುವ ಕೆಲವು ರೈತರು ಹಸಿರು ಮೇವು ಬೆಳೆದು ಸ್ವಲ್ಪ ಮಟ್ಟಿಗೆ ನೆಮ್ಮದಿ ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಮೇವಿನ ಬೀಜದ ಮಿನಿ ಕಿಟ್‌ಗಳನ್ನು ವಿತರಿಸಲಾಗುತ್ತಿದೆ’ ಎಂದರು.

ವರ್ಷಕ್ಕೆ ಏಳು ಕಟಾವು ಮಾಡಬಹುದಾದ ಉತ್ತಮ ತಳಿಯ ಮೇವಿನ ಬೀಜಗಳನ್ನು ರೈತರು ಪಡೆದು ತಮ್ಮ ಜಮೀನಿನಲ್ಲಿ ಬೆಳೆಸಬೇಕು. ಅಗತ್ಯಕ್ಕಿಂತ ಹೆಚ್ಚುವರಿಯಾಗಿ ಬೆಳೆದ ಮೇವನ್ನು ಇತರ ರೈತರಿಗೆ ಮಾರಾಟ ಮಾಡುವ ಮೂಲಕ ಆದಾಯವನ್ನೂ ಗಳಿಸಬಹುದು ಎಂದು ಸಲಹೆ ನೀಡಿದರು.

ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಜಯನಾಥರೆಡ್ಡಿ ಮಾತನಾಡಿ, ‘ತಾಲ್ಲೂಕಿಗೆ 2026–27ನೇ ಸಾಲಿನಲ್ಲಿ 2,450 ಮೇವಿನ ಬೀಜದ ಮಿನಿ ಕಿಟ್‌ಗಳು ಬಂದಿವೆ. ನೀರಾವರಿ ಸೌಲಭ್ಯ ಹೊಂದಿರುವ ಅರ್ಹ ರೈತರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಕಿಟ್‌ಗಳನ್ನು ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಕಿಟ್ ಪಡೆಯಲು ಯಾವ ದಾಖಲೆಗಳು ಬೇಕು?

ಕಿಟ್ ಪಡೆಯಲು ಇಲಾಖೆಯಲ್ಲಿ ಅರ್ಜಿ ಸಲ್ಲಿಸಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಪ್ರತಿ, ನೀರಾವರಿ ಸೌಲಭ್ಯ ಹೊಂದಿರುವ ಜಮೀನಿನ ಪಹಣಿ ಹಾಗೂ FRUITS ID ಸಂಖ್ಯೆಯನ್ನು ಸಲ್ಲಿಸಬೇಕು ಎಂದು ರೈತರಿಗೆ ಸೂಚಿಸಲಾಯಿತು.

  • ಭರ್ತಿ ಮಾಡಿದ ಅರ್ಜಿ
  • ಆಧಾರ್ ಕಾರ್ಡ್ ಪ್ರತಿ
  • ನೀರಾವರಿ ಸೌಲಭ್ಯ ಹೊಂದಿರುವ ಜಮೀನಿನ ಪಹಣಿ
  • FRUITS ID ಸಂಖ್ಯೆ

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆರ್. ಹೇಮಾವತಿ, ತಹಶೀಲ್ದಾರ್ ಎನ್. ಗಗನಸಿಂಧು, ಗ್ರೇಡ್-2 ತಹಶೀಲ್ದಾರ್ ಕೆ.ಎನ್. ಮಂಜುನಾಥ್, ಕೃಷಿ ಸಹಾಯಕ ನಿರ್ದೇಶಕ ಪಿ. ರವಿ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್, ಪಶುಪಾಲನಾ ಇಲಾಖೆಯ ಉಪ ವ್ಯವಸ್ಥಾಪಕ ಡಾ. ರವಿಕಿರಣ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Share
error: Content is protected !!