ಬರದ ನಡುವೆಯೂ ದಾಳಿಂಬೆಗೆ ಕೆ.ಜಿ.ಗೆ ₹221 ಬೆಲೆ: 17 ಟನ್ ಇಳುವರಿ ಪಡೆದ ರೈತನ ಯಶೋಗಾಥೆ

Anur farmer Srinivas pomegranate orchard Sidlaghatta sold at 221 rupees per kg

Sidlaghatta : ಮಳೆಯ ಕೊರತೆ, ಕುಸಿಯುತ್ತಿರುವ ಅಂತರ್ಜಲ ಮಟ್ಟ, ಬತ್ತಿದ ಕೆರೆ-ಕುಂಟೆಗಳು… ಇಂತಹ ಬರದ ಸಂಕಷ್ಟದ ನಡುವೆಯೂ ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದ ರೈತ ಶ್ರೀನಿವಾಸ್ ದಾಳಿಂಬೆ ಬೆಳೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ತಮ್ಮ ತೋಟದಲ್ಲಿ ಬೆಳೆದ ಉತ್ತಮ ಗುಣಮಟ್ಟದ ದಾಳಿಂಬೆಯನ್ನು ಕೆ.ಜಿ.ಗೆ ₹221ರಂತೆ ಮಾರಾಟ ಮಾಡುವ ಮೂಲಕ ದಾಖಲೆ ಬೆಲೆ ಪಡೆದಿದ್ದಾರೆ. ಉತ್ತಮ ಗುಣಮಟ್ಟದ ಹಣ್ಣು ಬೆಳೆಸಿದ ರೈತನ ಪರಿಶ್ರಮಕ್ಕೆ ಮನಸೋತ ಮಹಾರಾಷ್ಟ್ರದ ವರ್ತಕ ನಾಮದೇವ್ ಸರ್ಕಾರ್, ತೋಟದಲ್ಲಿಯೇ ಶ್ರೀನಿವಾಸ್ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.

ಜಿಲ್ಲೆಯ ಬಹುತೇಕ ರೈತರು ಕೃಷಿಗಾಗಿ ಕೊಳವೆಬಾವಿಗಳನ್ನೇ ಅವಲಂಬಿಸಿದ್ದಾರೆ. ಈ ಬಾರಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಸಂಕಷ್ಟ ಎದುರಾಗಿದ್ದರೂ, ಶ್ರೀನಿವಾಸ್ ತಮ್ಮ ದಾಳಿಂಬೆ ತೋಟವನ್ನು ಸಮರ್ಥವಾಗಿ ನಿರ್ವಹಿಸಿ ಉತ್ತಮ ಫಸಲು ಪಡೆದಿದ್ದಾರೆ. ನೀರಾವರಿ ಸೌಲಭ್ಯವಿರುವ ಜಿಲ್ಲೆಗಳ ರೈತರಿಗೂ ಕಡಿಮೆಯಿಲ್ಲದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನು ತಮ್ಮ ಸಾಧನೆಯ ಮೂಲಕ ತೋರಿಸಿಕೊಟ್ಟಿದ್ದಾರೆ.

Anur farmer Srinivas with pomegranate trees in orchard Sidlaghatta

ಒಂದು ಎಕರೆ ಎರಡು ಗುಂಟೆಯಲ್ಲಿ 17 ಟನ್ ಇಳುವರಿ

ಶ್ರೀನಿವಾಸ್ ಅವರು ಒಂದು ಎಕರೆ ಎರಡು ಗುಂಟೆ ಜಮೀನಿನಲ್ಲಿ ಒಟ್ಟು 440 ದಾಳಿಂಬೆ ಗಿಡಗಳನ್ನು ಬೆಳೆಸಿದ್ದಾರೆ. ಏಪ್ರಿಲ್ 12ರಂದು ಗಿಡಗಳ ಪ್ರೂನಿಂಗ್ (ರೆಂಬೆ ಕತ್ತರಿಸುವಿಕೆ) ಮಾಡಿದ್ದು, ಸುಮಾರು ಆರೂವರೆ ತಿಂಗಳ ಬಳಿಕ ಫಸಲು ಕಟಾವಿಗೆ ಬಂದಿದೆ. ಇದು ತೋಟದ ಎರಡನೇ ಕಟಾವಾಗಿದ್ದು, ಪ್ರತಿ ಗಿಡಕ್ಕೆ ಸರಾಸರಿ 38 ಕೆ.ಜಿ.ಯಷ್ಟು ಇಳುವರಿ ದೊರೆತಿದೆ ಎಂದು ರೈತರು ತಿಳಿಸಿದ್ದಾರೆ. ಒಟ್ಟು ಸುಮಾರು 17 ಟನ್ ಹಣ್ಣು ಉತ್ಪಾದನೆಯಾಗಿದೆ.

ತೋಟದಲ್ಲಿ 250 ಗ್ರಾಂನಿಂದ 700 ಗ್ರಾಂವರೆಗೆ ತೂಕದ ಹಣ್ಣುಗಳು ದೊರೆತಿವೆ. ಉತ್ತಮ ಗಾತ್ರ, ಗುಣಮಟ್ಟ ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿರುವ ಹಣ್ಣುಗಳಿಗೆ ಪ್ರತಿ ಕೆ.ಜಿ.ಗೆ ₹221ರ ಬೆಲೆ ಸಿಕ್ಕಿರುವುದು ವಿಶೇಷ. ಹಣ್ಣುಗಳನ್ನು ಖರೀದಿಸಿರುವ ಮಹಾರಾಷ್ಟ್ರದ ವರ್ತಕ ನಾಮದೇವ್ ಸರ್ಕಾರ್, ಅವುಗಳನ್ನು ಬಾಂಗ್ಲಾದೇಶಕ್ಕೆ ರಫ್ತು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

Pomegranate weighing 690 grams on digital scale Anur Sidlaghatta

ಸಾವಯವ ಗೊಬ್ಬರಕ್ಕೆ ಆದ್ಯತೆ

ದಾಳಿಂಬೆ ತೋಟದ ನಿರ್ವಹಣೆಯಲ್ಲಿ ಶ್ರೀನಿವಾಸ್ ಅವರು ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ ಹಾಗೂ ಹೊಂಗೆ ಹಿಂಡಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇವುಗಳ ಜತೆಗೆ ಅಗತ್ಯಕ್ಕೆ ಅನುಗುಣವಾಗಿ ರಾಸಾಯನಿಕ ಗೊಬ್ಬರಗಳನ್ನೂ ಬಳಸಿದ್ದಾರೆ. ಟ್ರೈಕೋಡರ್ಮಾ ಮತ್ತು ಸ್ಯೂಡೋಮೊನಾಸ್ನಂತಹ ಜೈವಿಕ ಉಪಯುಕ್ತ ಸೂಕ್ಷ್ಮಜೀವಿ ಉತ್ಪನ್ನಗಳ ಬಳಕೆಯನ್ನೂ ಕೃಷಿ ನಿರ್ವಹಣೆಯಲ್ಲಿ ಅಳವಡಿಸಿಕೊಂಡಿದ್ದಾರೆ.

ಗಿಡಗಳಿಗೆ ಅವುಗಳ ಅಗತ್ಯಕ್ಕೆ ತಕ್ಕಂತೆ ಪೋಷಕಾಂಶಗಳನ್ನು ಒದಗಿಸುವುದು, ಸೂಕ್ತ ಸಮಯದಲ್ಲಿ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದು ಮತ್ತು ಬೆಳೆಯ ಗುಣಮಟ್ಟದತ್ತ ಗಮನಹರಿಸುವುದು ಉತ್ತಮ ಫಸಲು ಪಡೆಯಲು ನೆರವಾಗಿದೆ ಎಂಬುದು ಅವರ ಅನುಭವ.

ವಿಜ್ಞಾನಿಗಳ ಮಾರ್ಗದರ್ಶನವೇ ಯಶಸ್ಸಿನ ಹಿಂದಿನ ಶಕ್ತಿ

ತಮ್ಮ ಸಾಧನೆಯ ಕುರಿತು ಮಾತನಾಡಿರುವ ರೈತ ಶ್ರೀನಿವಾಸ್, ದಾಳಿಂಬೆ ಬೆಳೆಗೆ ಉತ್ತಮ ಬೆಲೆ ದೊರೆತಿರುವುದಕ್ಕೆ ಹಿರಿಯ ವಿಜ್ಞಾನಿ ಸೋಲಾಪುರದ ಡಾ. ಮಂಜುನಾಥ್ ಅವರ ಮಾರ್ಗದರ್ಶನ ಮತ್ತು ಸಲಹೆಗಳನ್ನು ಪ್ರಮುಖವಾಗಿ ಸ್ಮರಿಸಿದ್ದಾರೆ.

“ಜೀರೋ ಕಟಿಂಗ್ ದಾಳಿಂಬೆಗೆ ಕೆ.ಜಿ.ಗೆ ₹221 ಬೆಲೆ ಸಿಕ್ಕಿರುವುದು ನನ್ನ ಪರಿಶ್ರಮದ ಫಲ. ಡಾ. ಮಂಜುನಾಥ್ ಸರ್ ಅವರು ಯಾವುದೇ ಅಪೇಕ್ಷೆಯಿಲ್ಲದೆ ದೇಶದಾದ್ಯಂತ ರೈತರಿಗೆ ಉಚಿತವಾಗಿ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಸಲಹೆಗಳ ಮೂಲಕ ನಮ್ಮ ತೋಟದ ನಿರ್ವಹಣೆ ಸುಧಾರಿಸಿದ್ದು, ಉತ್ತಮ ಬೆಳೆ ಬೆಳೆಯಲು ಪ್ರೇರಣೆ ದೊರೆತಿದೆ. ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಇದೇ ರೀತಿ ನಮ್ಮ ಹಿತೈಷಿಗಳಾದ ಸಿಂಗವಾರ ನಾಗರಾಜಣ್ಣ ಮತ್ತು ಮುತ್ತೂರು ರಾಮಚಂದ್ರಣ್ಣ ಅವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ,” ಎಂದು ಹೇಳಿದ್ದಾರೆ.

ಮನಸ್ಸಿಟ್ಟು ಬೆಳೆದರೆ ಕೃಷಿಯಲ್ಲಿ ಯಶಸ್ಸು ಸಾಧ್ಯ

“ಇದು ನನ್ನ ತೋಟದ ಎರಡನೇ ಬೆಳೆ. ಬೆಳೆದ ಬೆಳೆ ನನ್ನ ಕೈಬಿಟ್ಟಿಲ್ಲ. ಮನಸ್ಸಿಟ್ಟು ಕೃಷಿ ಮಾಡಿದರೆ ರೈತ ಯಾವತ್ತೂ ಕೈ ಸುಟ್ಟುಕೊಳ್ಳುವುದಿಲ್ಲ. ಆತ್ಮವಿಶ್ವಾಸದ ಜತೆಗೆ ಗಿಡಗಳಿಗೆ ಸಮಯಕ್ಕೆ ಸರಿಯಾಗಿ ಅಗತ್ಯವಾದ ಪೋಷಕಾಂಶ ಮತ್ತು ಆರೈಕೆ ಒದಗಿಸಿದರೆ ಯಶಸ್ಸು ಸಾಧಿಸಲು ಸಾಧ್ಯ,” ಎಂಬುದು ಶ್ರೀನಿವಾಸ್ ಅವರ ವಿಶ್ವಾಸ.

ಬರದ ಬವಣೆಯ ನಡುವೆಯೂ ಗುಣಮಟ್ಟದ ದಾಳಿಂಬೆ ಬೆಳೆದು ಉತ್ತಮ ಬೆಲೆ ಪಡೆದಿರುವ ಆನೂರು ಗ್ರಾಮದ ಶ್ರೀನಿವಾಸ್ ಅವರ ಸಾಧನೆ, ಕೃಷಿಯಲ್ಲಿ ವೈಜ್ಞಾನಿಕ ನಿರ್ವಹಣೆ, ನಿರಂತರ ಪರಿಶ್ರಮ ಮತ್ತು ಸೂಕ್ತ ಮಾರ್ಗದರ್ಶನದ ಮಹತ್ವವನ್ನು ಸಾರುತ್ತದೆ. ಕೃಷಿಯನ್ನೇ ನಂಬಿ ಬದುಕುವ ರೈತರಿಗೆ ಇವರ ಯಶೋಗಾಥೆ ಆತ್ಮವಿಶ್ವಾಸ ತುಂಬುವಂತಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Share
error: Content is protected !!