ಶಿಡ್ಲಘಟ್ಟ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರಿಯಾದ ಮೂಲಭೂತ ಸವಲತ್ತುಗಳಿಲ್ಲದಿರುವುದು ಒಂದೆಡೆಯಾದರೆ, ಪ್ರಾಂಶುಪಾಲರ ಹಾಗೂ ಸಿಬ್ಬಂದಿಯ ನಡುವೆ ಹೊಂದಾಣಿಕೆಯಿಲ್ಲದ ಕಾರಣ 10 ಗಂಟೆಗೆ ಶುರುವಾಗ ಬೇಕಾದ ತರಗತಿಗಳು ಹನ್ನೊಂದು ಗಂಟೆಯಾದರೂ ಕಾಲೇಜು ಬಾಗಿಲು ತೆರೆಯುವುದಿಲ್ಲ. ಹಾಗಾಗಿ ಕೂಡಲೇ ಪ್ರಾಂಶುಪಾಲರನ್ನು ವಜಾ ಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ವಿದ್ಯಾರ್ಥಿಗಳು ಕಾಲೇಜು ಬಾಗಿಲಿಗೆ ಅಡ್ಡಗಟ್ಟಿ ಕೆಲ ಕಾಲ ಪ್ರತಿಭಟನೆ ನಡೆಸಿದರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ತರಗತಿಗಳು ಬೆಳಗ್ಗೆ 10 ಗಂಟೆಗೆ ಶುರುವಾಗಬೇಕಾದರೂ, ಕಾಲೇಜು ಮುಖ್ಯ ದ್ವಾರ ತೆಗೆಯುವುದೇ ಹನ್ನೊಂದು ಗಂಟೆಯಾಗುತ್ತೆ. ಕಾಲೇಜಿನೊಳಗಿರುವ ಶೌಚಾಲಯಗಳು ದುರ್ವಾಸನೆ ಬೀರುತ್ತಿದ್ದು ಸ್ವಚ್ಚಗೊಳಿಸಿ ವರ್ಷಗಳೇ ಆಗಿವೆ. ಕೇಳಿದರೆ ನೀರಿಲ್ಲ ಎಂಬ ಸಬೂಬು. ಕಾಲೇಜಿನಲ್ಲಿ ಜಿಮ್ ಇದ್ದರೂ ಬಳಕೆಯಾಗುತ್ತಿಲ್ಲ. ದೈಹಿಕ ಶಿಕ್ಷಕರಿದ್ದರೂ ಪ್ರಯೋಜನವಿಲ್ಲ. ಆಡಿಟೋರಿಯಂ ನಲ್ಲಿ ನಾಯಿ ಸತ್ತು ದುರ್ವಾಸನೆ ಬೀರುತ್ತಿದ್ದರೂ ಸ್ವಚ್ಚಗೊಳಿಸಿಲ್ಲ. ಇನ್ನು ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕೆಟ್ಟಿದ್ದು, ದುರಸ್ತಿಯಾಗಿಲ್ಲ. ಇಷ್ಟೆಲ್ಲಾ ಕಾಲೇಜಿನಲ್ಲಿ ಅವ್ಯವಸ್ಥೆಗಳಿದ್ದರೂ ಸಕಾಲದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬಂದರೂ ಕಾಲೇಜು ಪ್ರಾಂಶುಪಾಲರು ಸೇರಿದಂತೆ ಸಿಬ್ಬಂದಿ ಬರುವುದಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.
ಇಡೀ ಕಾಲೇಜು ಕಟ್ಟಡ ಸುರಿಯುತ್ತಿದ್ದರೂ ದುರಸ್ತಿ ಮಾಡಿಸಲು ಯಾರೂ ಮುಂದಾಗಿಲ್ಲ. ಪಾಠಗಳನ್ನು ಸಕಾಲದಲ್ಲಿ ಮಾಡುತ್ತಿಲ್ಲ. ಶಿಸ್ತು ಇಲ್ಲದ ಸಿಬ್ಬಂದಿ ಯಾರ ಮಾತಿಗೂ ಬೆಲೆ ಕೊಡುತ್ತಿಲ್ಲ. ಶಾಸಕರೇ ಅಧ್ಯಕ್ಷರಾಗಿರುವ ಕಾಲೇಜು ಅಭಿವೃದ್ದಿ ಸಮಿತಿ ಹೆಸರಿಗಿದೆಯಾದರೂ ಈವರೆಗೂ ಒಂದೇ ಒಂದು ಸಭೆ ನಡೆಸಿಲ್ಲ. ಕಾಲೇಜಿನಲ್ಲಿ ಎನ್ ಎಸ್ ಎಸ್ ಘಟಕ ವಿದೆಯಾದರೂ ಇದರಿಂದ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಕೂಡಲೇ ಪ್ರಾಂಶುಪಾಲರನ್ನು ವಜಾಗೊಳಿಸುವುದು ಸೇರಿದಂತೆ ಕಾಲೇಜಿಗೆ ಅಗತ್ಯವಿರುವ ಮೂಲಭೂತ ಸವಲತ್ತು ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಈ ಬಗ್ಗೆ ಪ್ರಾಂಶುಪಾಲರನ್ನು ವಿಚಾರಿಸಿದರೆ ಕಾಲೇಜಿನಲ್ಲಿ ಸಮಸ್ಯೆಗಳಿರುವದು ನಿಜ, ಒಂದೆರಡು ತಿಂಗಳುಗಳಲ್ಲಿ ಎಲ್ಲವನ್ನು ಸರಿಪಡಿಸಲಾಗುವುದು ಎಂದು ಹೇಳಿದರು.
ಸ್ಥಳಕ್ಕೆ ನಗರಠಾಣೆ ಪಿಎಸ್ಸೈ ಸತೀಶ್ ಹಾಗು ಸಿಬ್ಬಂದಿ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಮಾತನಾಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈಬಿಟ್ಟರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಮಹೇಂದ್ರ, ಪ್ರಕಾಶ್, ಕಾರ್ತಿಕ್, ಸಧಾಕರ್, ಅಶೋಕ್, ಶೇಖರ್, ಅಫ್ನನ್ ಮತ್ತಿತರರು ಪಾಲ್ಗೊಂಡಿದ್ದರು.