Sidlaghatta : ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ರೈತಸ್ನೇಹಿ ಇಲಾಖೆಗಳಾಗಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಆಗಿಂದಾಗ್ಗೆ ರೈತರಿಗೆ ಮಾಹಿತಿ ನೀಡುತ್ತಾ, ಅವರಿಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ಕೃಷಿ ಇಲಾಖೆಯ ಆವರಣದಲ್ಲಿ ಮಂಗಳವಾರ 2023-24 ನೇ ಸಾಲಿನ ಬಿತ್ತನೆ ಬೀಜಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೆಲವು ಸರ್ಕಾರಿ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿಯಿಂದಾಗಿ ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ತಲುಪುತ್ತಿಲ್ಲ ಎಂದು ದೂರುಗಳು ಬರುತ್ತಿವೆ. ನಾನೂ ರೈತ, ರೈತರ ಕಷ್ಟ ಗೊತ್ತಿದೆ. ರೈತರನ್ನು ಅಧಿಕಾರಿಗಳು ಪದೇಪದೇ ತಿರುಗಾಡಿಸಬೇಡಿ. ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ರೈತರಿಗೆ ತಿಳುವಳಿಕೆ ಮೂಡಿಸಬೇಕು ಮತ್ತು ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕು ಎಂದು ಹೇಳಿದರು.
ಕೃಷಿ ಇಲಾಖೆಯ ಉಪನಿರ್ದೇಶಕಿ ಮಂಜುಳಾ ಮಾತನಾಡಿ, ರಾಗಿ(ಜಿಪಿಯು-28/ಎಂ.ಆರ್-1/ ಎಂ.ಆರ್-6/ ಎಂ.ಎಲ್-365), ನವಣೆ(ಡಿ.ಎಚ್.ಎಫ್.ಟಿ-109-03), ತೊಗರಿ(ಬಿ.ಆರ್.ಜಿ-5), ಅಲಸಂದಿ(ಡಿಸಿ-15), ನೆಲಗಡಲೆ(ಕೆ-6), ಮುಸುಕಿನ ಜೋಳ (ಜಿಕೆ-3045/3018/ಸಿಪಿ 848/818) ಬೀಜಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ರೈತರು ಈ ಬಿತ್ತನೆ ಬೀಜಗಳನ್ನು ಖರೀದಿಸಿ ಸರ್ಕಾರದ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕು.
ಪ್ರತಿಯೊಂದು ಚೀಲದ ಬ್ಯಾಗ್ ಮೇಲೆ ಬಾರ್ ಕೋಡ್ ಇರುತ್ತದೆ. ಇದರಲ್ಲಿ ಬೀಜದ ಸಂಪೂರ್ಣ ಮಾಹಿತಿ ಸಿಗುತ್ತದೆ. ಅದನ್ನು ಯಾವ ರೈತರಿಗೆ ಕೊಡಲಾಗಿದೆ ಎಂಬ ಮಾಹಿತಿಯೂ ನಮ್ಮಲ್ಲಿ ಲಭ್ಯವಿರುತ್ತದೆ. ಕಳಪೆ ಬಿತ್ತನೆ ಬೀಜಗಳನ್ನು ತಡೆಗಟ್ಟಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರು ಸರ್ಕಾರ ಕೇಳಿರುವ ದಾಖಲೆಗಳನ್ನು ನೀಡಿ ಸಬ್ಸಿಡಿ ದರದಲ್ಲಿ ಪಡೆಯಬಹುದು. ಸಾಮಾನ್ಯ ವರ್ಗದ ರೈತರಿಗೂ ಸಬ್ಸಿಡಿ ನೀಡಲಾಗಿದೆ. ಮುಂಗಾರು ಮಳೆ ಪ್ರವೇಶಕ್ಕೆ ತಡವಾಗಿದ್ದು, ರೈತರು ಆತಂಕಪಡಬೇಡಿ. ಹವಮಾನ ಇಲಾಖೆ ತಿಳಿಸಿರುವಂತೆ ಈ ತಿಂಗಳ ಎರಡನೇ ವಾರದಲ್ಲಿ ಮಳೆ ಬರುವ ಸಾಧ್ಯತೆ ಇದೆ. ಮಳೆ ಬಂದ ನಂತರ ಬಿತ್ತನೆ ಪ್ರಕ್ರಿಯೆ ಆರಂಭಿಸುವಂತೆ ಹೇಳಿದರು.
ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಮರನಾರಾಯಣ್, ಅಧಿಕಾರಿ ಪ್ರವೀಣ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ಮುಖಂಡರಾದ ಬಂಕ್ ಮುನಿಯಪ್ಪ, ಹುಜಗೂರು ರಾಮಣ್ಣ, ತರಬಳ್ಳಿ ಭಾಸ್ಕರರೆಡ್ಡಿ, ರೆಡ್ಡಿಸ್ವಾಮಿ, ಬೂದಾಳ ರಾಮಾಂಜಿ, ಬೆಳ್ಳೂಟಿ ಮುನಿಕೆಂಪಣ್ಣ, ತಾದೂರು ಮಂಜುನಾಥ್, ಆತ್ಮಾ ಯೋಜನೆಯ ಅಶ್ವತ್ಥನಾರಾಯಣ್ ಹಾಜರಿದ್ದರು.