ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದ ತಾಲ್ಲೂಕಿನ ಎಲ್ಲಾ ರೈತರಿಗೂ ಸಕಾಲದಲ್ಲಿ ಬೆಳೆ ನಷ್ಟ ಪರಿಹಾರ ನೀಡುವಂತೆ ಒತ್ತಾಯಿಸಿ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ತಹಶೀಲ್ದಾರ್ ಬಿ.ಎಸ್.ರಾಜೀವ್ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ತಾಲ್ಲೂಕಿನಾದ್ಯಂತ ಶೇ 90 ರಷ್ಟು ಬೆಳೆ ಹಾನಿಯಾಗಿವೆ. ಸರ್ಕಾರ ಬೆಳೆ ನಷ್ಟ ಪರಿಹಾರ ನೀಡುವ ಘೋಷಣೆ ಮಾಡಿರುವುದು ಸ್ವಾಗತಾರ್ಹ, ಆದರೆ ತಾಲ್ಲೂಕಿನಾಧ್ಯಂತ ಬಹುತೇಕ ಬೆಳೆ ಹಾನಿಯಾಗಿದ್ದು ಜಮೀನಿನ ಪಹಣಿಯಲ್ಲಿರುವ ಕೆಲ ಖಾತೆದಾರರು ಮೃತಪಟ್ಟಿರುವುದರಿಂದ ಅಂತಹವರ ಅರ್ಜಿಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು, ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಸ್ವೀಕರಿಸದೇ ತಿರಸ್ಕರಿಸುತ್ತಿದ್ದಾರೆ. ಹೀಗಾಗಿ ಬೆಳೆ ನಷ್ಟವಾದರೂ ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ. ಸರ್ಕಾರದ ಆದೇಶದಂತೆ ಮೃತ ರೈತ ಕುಟುಂಬದ ಮುಖ್ಯಸ್ಥರಿಗೆ ಒಪ್ಪಿಗೆ ಪತ್ರದ ಮುಖಾಂತರ ಬೆಳೆ ನಷ್ಟ ಪರಿಹಾರ ನೀಡಲು ಅವಕಾಶವಿದೆ. ಕೇಂದ್ರ ಸರ್ಕಾರದ ಕಿಸಾನ್ ಸಮಾನ್ ಯೋಜನೆ ರೂಪದಲ್ಲಿ ಬೆಳೆ ಪರಿಹಾರ ನೀಡಲು ಕ್ರಮವಹಿಸಬೇಕು ಹಾಗೂ ಬೆಳೆ ನಷ್ಟ ಹೊಂದಿದ ಎಲ್ಲಾ ರೈತರಿಗೂ ಸಕಾಲದಲ್ಲಿ ಪರಿಹಾರ ನೀಡಲು ತಮ್ಮ ಕೆಳ ಮಟ್ಟದ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಬಿ.ಕೆ.ಮುನಿಕೆಂಪಣ್ಣ, ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಪದಾಧಿಕಾರಿಗಳಾದ ಕೆ.ಎನ್.ಮಂಜುನಾಥ, ಡಿ.ವಿ.ನಾರಾಯಣಸ್ವಾಮಿ, ವೆಂಕಟೇಶಪ್ಪ, ಮುನೇಗೌಡ ಹಾಜರಿದ್ದರು.