Sidlaghatta : 2024-25 ನೇ ಸಾಲಿನ ಕೃಷಿ ಯಾಂತ್ರೀಕರಣ, ಕೃಷಿ ಸಂಸ್ಕರಣೆ, ಅಟಲ್ ಭೂಜಲ, ಪ್ರಧಾನ ಮಂತಿ ಕೃಷಿ ಸಿಂಚಾಯಿ ಯೋಜನೆ ಹಾಗೂ ಕೃಷಿ ಭಾಗ್ಯ ಯೋಜನೆಗಳ ಸಹಾಯ ಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯಾ ವ್ಯಾಪ್ತಿಯ ಹೋಬಳಿ ಕೇಂದ್ರದಲ್ಲಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪಿ.ಆರ್.ರವಿ ಈ ಕುರಿತು ಮಾಹಿತಿ ನೀಡಿದ್ದು, ಕೃಷಿ ಯಾಂತ್ರೀಕರಣ ಯೋಜನೆಯಡಿ ಸಹಾಯಧನದಲ್ಲಿ ಪವರ್ ಟಿಲ್ಲರ್, ರೋಟಿವೇಟರ್, ಎಂ.ಬಿ.ನೇಗಿಲು, ಕಲ್ಟಿವೇಟರ್, ಸಸ್ಯ ಸಂರಕ್ಷಣಾ ಔಷಧಿ ಸಿಂಪಡಿಸುವ ಯಂತ್ರ, ಚಾಪ್ ಕಟ್ಟರ್ ಇನ್ನಿತರೆ ಪರಿಕಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದರು.
ಸಾಮಾನ್ಯವರ್ಗದ ರೈತರಿಗೆ ಶೇ 50 ರಷ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ 90 ರಷ್ಟು ರಿಯಾಯಿತಿ ದರದಲ್ಲಿ ಗರಿಷ್ಠ 1 ಲಕ್ಷ ರೂ. ಮೀರದಂತೆ ಸಹಾಯಧನ ನೀಡಲಾಗುತ್ತದೆ.
ಕೃಷಿ ಸಂಸ್ಕರಣೆ ಯೋಜನೆಯಡಿ 8*6 ಮೀಟರ್ ಅಳತೆಯ ಟಾರ್ಪಲಿನ್, ರಾಗಿ ಕ್ಲೀನಿಂಗ್ ಮಿಷನ್, ಪಲ್ವರೈಜರ್ ಹಾಗೂ ಪ್ಲೋರ್ ಮಿಲ್, ಎಣ್ಣೆಗಾಣ ಹಾಗೂ ಇತರೆ ಪರಿಕರಗಳನ್ನು ಸಾಮಾನ್ಯವರ್ಗದ ರೈತರಿಗೆ ಶೇ 50ರಷ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ 90ರಷ್ಟು ರಿಯಾಯಿತಿ ದರದಲ್ಲಿ ಗರಿಷ್ಠ 1 ಲಕ್ಷ ರೂ ಮೀರದಂತೆ ಸಹಾಯಧನ ನೀಡಲಾಗುತ್ತದೆ ಎಂದರು.
ಅಟಲ್ ಭೂಜಲ ಯೋಜನೆಯಡಿ ತುಂತುರ ನೀರಾವರಿ ಘಟಕವನ್ನು ಶೇ 90ರಷ್ಟು ರಿಯಾಯಿತಿ ದರದಲ್ಲಿ ಎಲ್ಲಾ ವರ್ಗದ ರೈತರಿಗೆ ಹಾಗೂ ಹನಿ ನೀರಾವರಿ ಘಟಕಗಳನ್ನು ಸಾಮಾನ್ಯ ವರ್ಗದ ಸಣ್ಣ ಅತಿ ಸಣ್ಣ ರೈತರಿಗೆ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ರೈತರಿಗೆ ಶೇ 90ರಷ್ಟು ರಿಯಾಯಿತ ದರದಲ್ಲಿ ಹಾಗೂ ಸಾಮಾನ್ಯ ವರ್ಗದ ದೊಡ್ಡ ರೈತರಿಗೆ ಶೇ 45ರಷ್ಟು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ ಎಂದು ವಿವರಿಸಿದರು.
ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ, ಬೇಲಿ ತಂತಿ, ಪಾಲಿಥೀನ್ ಹೊದಿಕೆ, ಡೀಸೆಲ್ ಪಂಪ್‌ಸೆಟ್ ಹಾಗೂ ಲಘು ನೀರಾವರಿ ಘಟಕ ಪ್ಯಾಕೇಜ್ ರೂಪದಲ್ಲಿ ಪಡೆಯಲು ಸಾಮಾನ್ಯ ವರ್ಗದವರಿಗೆ ಶೇ 80ರಷ್ಟು ಮತ್ತು ಪರಿಶಿಷ್ಟ ಜಾತಿ ಪಂಗಡದ ರೈತರಿಗೆ ಶೇ 90ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುವುದು.
ಈ ಎಲ್ಲ ಯೋಜನೆಗಳಡಿ ಸಹಾಯ ಧನ ಪಡೆಯಲು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಶ್ ಪುಸ್ತಕ ಜೆರಾಕ್ಸ್ ಪ್ರತಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರು ಜಾತಿ ಪ್ರಮಾಣ ಪತ್ರ, ನಿರಪೇಕ್ಷಣಾ ಪ್ರಮಾಣ ಪತ್ರ ಸೇರಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ವ್ಯಾಪ್ತಿಯ ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬಹುದೆಂದು ಅವರು ಕೋರಿದರು.