Yannuru, Sidlaghatta : ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೋರ್ವ ಪತ್ನಿ ಸೇರಿ ತನ್ನಿಬ್ಬರ ಪುತ್ರಿಯರಿಗೆ ಬೆಂಕಿ ಹಚ್ಚಿ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲ್ಲೂಕಿನ ಹೆಣ್ಣೂರು ಗ್ರಾಮದಲ್ಲಿ ಬುಧವಾರ ನಡೆದಿದೆ.
ತಾಲ್ಲೂಕಿನ ಹೆಣ್ಣೂರು ಗ್ರಾಮದ ನೇತ್ರಾವತಿ (37), ಸ್ನೇಹ(11), ವರ್ಷ(19) ಮೃತ ದುರ್ದೈವಿಗಳು ಎನ್ನಲಾಗಿದೆ. ಇವರಿಗೆ ಬೆಂಕಿ ಹಚ್ಚಿದ ಬಳಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಸೊಣ್ಣೇಗೌಡ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲ್ಲೂಕಿನ ಹೆಣ್ಣೂರು ಗ್ರಾಮದ ಸೊಣ್ಣೇಗೌಡ ಹಾಗು ಕೋಲಾರ ತಾಲೂಕಿನ ನಾಚಹಳ್ಳಿಯ ನೇತ್ರಾವತಿಗೆ ವಿವಾಹವಾಗಿ 12 ವರ್ಷಗಳಾಗಿತ್ತು. ಇವರಿಗೆ ಸ್ನೇಹಾ ಹಾಗು ವರ್ಷಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು ಮೊದ ಮೊದಲು ಎಲ್ಲವೂ ಚೆನ್ನಾಗಿದ್ದ ಇವರ ಸಂಸಾರದಲ್ಲಿ ಕಳೆದ ಐದಾರು ವರ್ಷಗಳಿಂದ ಸೊಣ್ಣೇಗೌಡನಿಗ ತನ್ನ ಪತ್ನಿ ನೇತ್ರಾವತಿ ಗ್ರಾಮದ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಅನುಮಾನ ಮೂಡಿ ಈ ಬಗ್ಗೆ ಹಲವಾರು ಭಾರಿ ಗಲಾಟೆ, ರಾಜಿ ಪಂಚಾಯಿತಿ ನಡೆದಿತ್ತು ಎನ್ನಲಾಗಿದೆ.
ಇದೇ ಕಾರಣಕ್ಕೆ ಮಂಗಳವಾರ ರಾತ್ರಿಯೂ ಗಂಡ ಹೆಂಡತಿ ನಡುವೆ ನಡೆದ ಜಗಳ ಏನೂ ಆರಿಯದ ಇಬ್ಬರು ಕಂದಮ್ಮಗಳು ಸೇರಿದಂತೆ ಮೂವರ ಸಾವಿನಲ್ಲಿ ಅಂತ್ಯವಾಗಿದೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ.ಎಲ್.ನಾಗೇಶ್ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ತನಿಖೆ ಮುಂದುವರೆಸಿದ್ದಾರೆ.