Sidlaghatta : ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಶನಿವಾರ ಡಾ.ಫ.ಗು.ಹಳಕಟ್ಟಿ (Fa.Gu. Halakatti Birth Anniversary) ಅವರ ಜನ್ಮದಿನವನ್ನು “ವಚನ ಸಾಹಿತ್ಯ ಸಂರಕ್ಷಣಾ ದಿನ” ವೆಂದು ಆಚರಿಸಿ, ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಿರಸ್ತೆದಾರ್ ಮಂಜುನಾಥ್ ಅವರು ಮಾತನಾಡಿದರು.
ಬಿಜಾಪುರದ ಇನ್ನೊಂದು ಗುಮ್ಮಟ ಎಂದೇ ಖ್ಯಾತರಾದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ವಚನ ಸಾಹಿತ್ಯಕ್ಕಾಗಿ ಅಪಾರ ಶ್ರಮಪಟ್ಟರು. ನಾಡಿನಾದ್ಯಂತ ಸಂಚರಿಸಿ ವಚನಗಳನ್ನು ಸಂಗ್ರಹಿಸಿದರು ಎಂದು ಅವರು ತಿಳಿಸಿದರು.
ಡಾ. ಫ. ಗು. ಹಳಕಟ್ಟಿ ಅವರು ಬೆಳಗಾವಿ, ಬಿಜಾಪುರಗಳಲ್ಲಿ ವಕೀಲರಾಗಿ ಮುಂಬಯಿ ಶಾಸನ ಸಭೆಗೆ ಆಯ್ಕೆಯಾಗಿದ್ದರು. 1926 ರಲ್ಲಿ ಬಳ್ಳಾರಿಯಲ್ಲಿ ನಡೆದ 12 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1928 ರಲ್ಲಿ ನಡೆದ 3ನೆಯ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿತು. ಬ್ರಿಟಿಷ್ ಇಂಡಿಯಾ ಸರ್ಕಾರ ರಾವ್ ಬಹದ್ದೂರ್ ಹಾಗೂ “ರಾವ್ ಸಾಹೇಬ್’ ಪ್ರಶಸ್ತಿಗಳನ್ನು ನೀಡಿತು.
ಇವರಿಗೆ :ವಚನ ಶಾಸ್ತ್ರ ಪ್ರವೀಣ”, “ವಚನ ಶಾಸ್ತ್ರ ಪಿತಾಮಹ” ಗೌರವಾನ್ವಿತ ಪ್ರಶಸ್ತಿಗಳು ಬಂದಿವೆ. ಇವರು ಸುಮಾರು 166 ಗ್ರಂಥಗಳನ್ನು ಬೆಳಕಿಗೆ ತಂದರು. ಮುಂಬಯಿ ಸರ್ಕಾರದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರು ಎಂದು ಹೇಳಿದರು.
ತೋಟಗಾರಿಕೆ ಇಲಾಖೆಯ ಲಕ್ಷ್ಮೀನಾರಾಯಣ್, ಸಿಡಿಪಿಒ ಇಲಾಖೆಯ ನವತಾಜ್ ಹಾಜರಿದ್ದರು.