ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲೆ ಹಾಗೂ ಶಿಡ್ಲಘಟ್ಟ ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಿಸರ್ಗ ಇಕೋ ಕ್ಲಬ್ ಮಕ್ಕಳ ಕಾರ್ಯಕ್ರಮದಲ್ಲಿ ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ಸಂಯೋಜಕ ಜಯರಾಂ ಸತೀಶ್ ಮಾತನಾಡಿದರು.
ಮಕ್ಕಳ ಕಲಿಕೆಗೆ ಪಠ್ಯೇತರ ಚಟುವಟಿಕೆಗಳು ಬಹಳ ಪರಿಣಾಮಕಾರಿಯಾಗಿವೆ ಎಂದು ಅವರು ತಿಳಿಸಿದರು.
ಶಾಲಾ ಹಂತದಲ್ಲಿ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಲು ಮಕ್ಕಳ ಪರಿಸರ ಸಂರಕ್ಷಣೆ ಸಂಘ, ಮಕ್ಕಳ ಹಕ್ಕುಗಳ ರಕ್ಷಣೆಗೆ ಮಕ್ಕಳ ಹಕ್ಕುಗಳ ಸಂಘ, ಹೆಣ್ಣು ಮಕ್ಕಳ ಕುಂದುಕೊರತೆಗಳ ಪರಿಹಾರಕ್ಕಾಗಿ ಮೀನಾ ಸಂಘ, ಇತ್ಯಾದಿಗಳಲ್ಲಿ ಮಕ್ಕಳು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವುದರಿಂದ ಮಕ್ಕಳಿಗೆ ಸಾಮಾಜಿಕ ರೀತಿ ನೀತಿಗಳು ಮತ್ತು ಜೀವನ ಕೌಶಲ್ಯಗಳು ಅಭಿವೃದ್ಧಿ ಆಗುತ್ತದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಂ.ದೇವರಾಜ್ ಮಾತನಾಡಿ, ನಮ್ಮ ಶಾಲೆಯಲ್ಲಿ ಮಕ್ಕಳ ಕಲಿಕೆಯನ್ನು ನಾಲ್ಕು ಗೋಡೆಗಳ ನಡುವೆ ಪಾಠಗಳಿಗೆ ಮಾತ್ರ ಸೀಮಿತಗೊಳಿಸಿಲ್ಲ. ಬದಲಾಗಿ ಅನುಭವಾತ್ಮಕ ಕಲಿಕೆಗೆ ಹೆಚ್ಚು ಪ್ರಾಧಾನ್ಯತೆ ನೀಡುವ ಸಲುವಾಗಿ ಸತತವಾಗಿ ಇಂತಹ ಅನೇಕ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು, ಈ ಚಟುವಟಿಕೆಗಳು ಮಕ್ಕಳಲ್ಲಿ ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ. ಇನ್ನೂ ಈ ತರಹದ ಹಲವು ಕಾರ್ಯಕ್ರಮಗಳನ್ನು ನಡೆಸಲು ಸಮುದಾಯದ ಸಹಕಾರ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಜವಾಬ್ದಾರಿ ಬಗ್ಗೆ ಭಾಷಣ ಸ್ಪರ್ಧೆ ಮತ್ತು ರಾಸಾಯನಿಕ ಕೃಷಿ ದುಷ್ಪರಿಣಾಮಗಳ ಬಗ್ಗೆ ಚಿತ್ರಕಲೆ, ಪರಿಸರ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಷ್ಮಿತಾ, ಮೌನಿಕಾ, ನಿಖಿಲ್, ಪುಷ್ಪ, ರಮೇಶ್, ಸಂಜನಾ, ವಿನಯ್ ಮತ್ತಿತರ ಮಕ್ಕಳಿಗೆ ಚೈಲ್ಡ್ ರೈಟ್ಸ್ ಟ್ರಸ್ಟ್ ವತಿಯಿಂದ ಬಹುಮಾನ ವಿತರಿಸಲಾಯಿತು.
ಚೈಲ್ಡ್ ರೈಟ್ಸ್ ಟ್ರಸ್ಟ್ ರಿಮ್ ಯೋಜನೆ ಕಾರ್ಯಕರ್ತೆ ಸ್ವಪ್ನಾ ಶಿಕ್ಷಕರಾದ ವಿ.ಎಂ.ಮಂಜುನಾಥ್, ಎಚ್.ಬಿ.ಕೃಪಾ, ಪಿ.ಸುದರ್ಶನ್, ಎಸ್.ಎ.ನಳಿನಾಕ್ಷಿ, ಗ್ರಾಮದ ಪಿಳ್ಳಮುನಿಯಪ್ಪ ಹಾಜರಿದ್ದರು.