Yeddulatippenhalli, Sidlaghatta : ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲು ಸರ್ಕಾರದಿಂದ ಅನುದಾನ ಸಿಗುತ್ತಿಲ್ಲ. ಆದರೂ ಖಾಸಗಿ ಕಂಪನಿ, ದಾನಿಗಳನ್ನು ಹಿಡಿದು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವಂತ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿಯ ಎದ್ದಲತಿಪ್ಪೇನಹಳ್ಳಿಯಲ್ಲಿ ಬುಧವಾರ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಸರ್ಕಾರಿ ಶಾಲಾ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದಿಂದ ಸಾಕಷ್ಟು ಪ್ರಮಾಣದಲ್ಲಿ ಅನುದಾನ ಬರುತ್ತಿಲ್ಲ. ಆದರೆ ಕುಡಿಯುವ ನೀರಿನ ಬವಣೆ ದಿನ ದಿನಕ್ಕೂ ಹೆಚ್ಚುತ್ತದೆ. ಜನರಿಗೆ ಶುದ್ಧ ಕುಡಿಯುವ ನೀರನ್ನು ನೀಡುವುದು ಸರ್ಕಾರ ಮತ್ತು ಜನಪ್ರತಿನಿಧಿಗಳಾದ ನಮ್ಮ ಜವಾಬ್ದಾರಿ ಆಗಿದೆ. ಹಾಗಾಗಿ ಕಂಪನಿಗಳನ್ನು ಹಿಡಿದು ಮತ್ತು ದಾನಿಗಳ ಮೂಲಕ ಶುದ್ಧ ನೀರಿನ ಘಟಕಗಳನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ನಮ್ಮ ಶಿಡ್ಲಘಟ್ಟ ತಾಲ್ಲೂಕು ತೀರಾ ಹಿಂದುಳಿದ ತಾಲ್ಲೂಕಾಗಿದ್ದು ಶಿಕ್ಷಣ, ಆರೋಗ್ಯ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ನಾವು ಬೇರೆ ತಾಲ್ಲೂಕುಗಳಿಗೆ ಹೋಲಿಸಿದಲ್ಲಿ ತೀರಾ ಹಿಂದೆ ಬಿದ್ದಿದ್ದೇವೆ. ನಾನು ನನ್ನ ಅಧಿಕಾರ ಇರುವವರೆಗೂ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಿದ್ದು ಎಲ್ಲರ ಸಹಕಾರ ಇರಲಿದೆ ಎಂದರು.
ಹೊಸಪೇಟೆ ಗ್ರಾಮ ಪಂಚಾಯಿತಿಯ ಎಸ್ಸಿಎಸ್ಟಿ ಅನುದಾನದ ಶೇ 25 ಹಾಗೂ 15 ನೇ ಹಣಕಾಸು ಯೋಜನೆ, ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್, ಎಕ್ಸ್ ಒನ್ ಮೊಬೈಲ್, ಉನ್ನತಿ ಸಂಸ್ಥೆಯ ಅನುದಾನದಲ್ಲಿ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ, ಸರ್ಕಾರಿ ಶಾಲಾ ಕೊಠಡಿಯನ್ನು ಉದ್ಘಾಟಿಸಲಾಯಿತು.
ಹೊಸಪೇಟೆ ಗ್ರಾಮಪಂಚಾಯಿತಿಯ ಜೆ.ದೇವಗಾನಹಳ್ಳಿ, ಮಲ್ಲೇನಹಳ್ಳಿ, ಫಕೀರನಹೊಸಹಳ್ಳಿ, ಕಲ್ಯಾಪುರ, ಎದ್ದಲತಿಪ್ಪೇನಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಅಂಗನವಾಡಿ ಕಟ್ಟಡ, ಶಾಲಾ ಕೊಠಡಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಹೊಸಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಂ.ಮಂಜುನಾಥಗೌಡ, ಉಪಾಧ್ಯಕ್ಷೆ ಜಯಮ್ಮ, ಪಿಡಿಒ ಯಮುನಾರಾಣಿ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಸಿ.ವಿ.ನಾರಾಯಣಸ್ವಾಮಿ, ಮುಖಂಡರಾದ ಬಂಕ್ ಮುನಿಯಪ್ಪ, ತಾದೂರು ರಘು, ನಾಗಮಂಗಲ ಶ್ರೀನಿವಾಸಗೌಡ, ಇಒ ಮುನಿರಾಜು, ಸಿಡಿಪಿಒ ನವತಾಜ್, ಎಸಿಡಿಪಿಒ ಲಕ್ಷ್ಮಿದೇವಮ್ಮ, ಗ್ರಾ.ಪಂ.ಸದಸ್ಯರಾದ ಸುರೇಶ್, ಸುಜಾತಮ್ಮ, ಶ್ರೀನಿವಾಸ್, ರೂಪ, ಯಶೋಧಮ್ಮ, ನಳಿನಾ, ರಾಜಶೇಖರ್, ಸತ್ಯಸಾಯಿ ಅನ್ನಪೂರ್ಣೇಶ್ವರಿ ಟ್ರಸ್ಟ್ ನ ರಾಜಶೇಖರ್ ಹಾಜರಿದ್ದರು.