ಶಿಡ್ಲಘಟ್ಟ ತಾಲ್ಲೂಕಿನ ತುಟ್ಟತುದಿಯಲ್ಲಿರುವ ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿಯ ಬೈರಸಂದ್ರ ಗ್ರಾಮ ನೀರು ಮತ್ತು ಸ್ವಚ್ಛತೆಯ ಸಮಸ್ಯೆಯಿಂದ ಬಳಲುತ್ತಿದ್ದು, ಗ್ರಾಮಸ್ಥರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ದೂರಿದ್ದಾರೆ.
ಬೈರಸಂದ್ರ ಗ್ರಾಮದಲ್ಲಿ 250 ಮನೆಗಳಿವೆ. ಈ ಗ್ರಾಮದಿಂದ ಆಯ್ಕೆಯಾಗಿರುವ ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಶುದ್ಧ ನೀರಿನ ಘಟಕವಿದೆ. 15 ರಿಂದ 20 ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಅದು ಏನೇನೂ ಸಾಲದು. ಎರಡು ಕೊಳವೆ ಬಾವಿಗಳಿವೆ. ಏನು ತಾನೆ ಪ್ರಯೋಜನ. ಹಸುಗಳನ್ನು ಸಾಕುವವರು ಟ್ಯಾಂಕರುಗಳಿಂದ ನೀರು ಹಾಕಿಸಿಕೊಳ್ಳಬೇಕಾಗಿದೆ. ಒಂದು ಟ್ಯಾಂಕರ್ ನೀರಿಗೆ 500 ರೂ ತೆರಬೇಕು ಎಂದು ಗ್ರಾಮದ ನಟರಾಜ್ ಸಮಸ್ಯೆಯನ್ನು ವಿವರಿಸಿದರು.
ನೀರಿನ ಪೈಪುಗಳೆಲ್ಲವೂ ಗ್ರಾಮದ ತ್ಯಾಜ್ಯದ ನೀರಿನ ಚರಂಡಿಯಲ್ಲಿಯೇ ಹಾದು ಹೋಗಿವೆ. ಆಗಾಗ್ಗೆ ಈ ಚರಂಡಿ ನೀರು ಸಹ ಈ ಪೈಪಿನ ಮೂಲಕ ಹರಿದು ನೀರೆಲ್ಲ ಕಲುಷಿತವಾಗುತ್ತದೆ. ನಮಗಂತೂ ನೀರಿನ ಸಮಸ್ಯೆಯನ್ನು ಹೇಳಿ ಹೇಳಿ ಸಾಕಾಗಿದೆ ಎಂದು ಅವರು ಹೇಳಿದರು.
“ಮನೆಗಳ ಬಳಿ ನೀರಿನ ಪೈಪು ಬಂದಿರುವಲ್ಲಿ ಕೆಳಗಡೆ ಹಳ್ಳ ತೋಡಿಕೊಂಡಿದ್ದು, ಅದರಲ್ಲಿಳಿದು ನೀರು ಹಿಡಿಯುವುದೇ ದೊಡ್ಡ ಬದುಕಾಗಿದೆ. ಎಷ್ಟೋ ಸರಿ ಗಲೀಜು ನೀರು ಬರುತ್ತದೆ. ಯಾರು ಹೇಳೋರು ನೀರು ಬಿಡೋರಿಗೆ. ಸರಿಯಾಗಿ ನೀರು ಬಿಟ್ಟರೆ ಸಾಕಾಗಿದೆ” ಎನ್ನುತ್ತಾರೆ ಗ್ರಾಮದ ಮುನಿಯಮ್ಮ.
ಗ್ರಾಮದ ನೀರಿನ ಸಮಸ್ಯೆಯ ಬಗ್ಗೆ ಪಿಡಿಒ ಅರುಣಾಕುಮಾರಿಯವರನ್ನು ಮಾತನಾಡಿಸಿದಾಗ, “ನೀರಿನ ಸಮಸ್ಯೆ ಎಲ್ಲೆಡೆ ಇದೆ. ನವು ಖಾಸಗಿ ಕೊಳವೆ ಬಾವಿಗಳಿಂದಲೂ ನೀರನ್ನು ಪಡೆಯುತ್ತಿದ್ದೇವೆ. ಗ್ರಾಮಸ್ಥರು ಹೆಚ್ಚೆಚ್ಚು ಕನೆಕ್ಷನ್ ಗಳನ್ನು ಹಾಕಿಕೊಳ್ಳುವುದರಿಂದ ನೀರನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಲು ಆಗುತ್ತಿಲ್ಲ. ಕೆಲವರು ಮೋಟರ್ ಮೂಲಕ ನೀರನ್ನು ನಲ್ಲಿಯಿಂದ ಪಂಪ್ ಮಾಡಿಕೊಳ್ಳುವರು. ನರೇಗಾ ಮೂಲಕ ಕಾಮಗಾರಿಯನ್ನು ಇನ್ನೇನು ಪ್ರಾರಂಭಿಸಲಿದ್ದು, ಚರಂಡಿಯಲ್ಲಿರುವ ನೀರಿನ ಪೈಪುಗಳನ್ನು ಪ್ರತ್ಯೇಕವಾಗಿರಿಸಲಿದ್ದೇವೆ. ಕೋವಿಡ್ ನಿಂದಾಗಿ ಗ್ರಾಮ ಪಂಚಾಯಿತಿಗೆ ಬರಬೇಕಾದ ಆದಾಯ ನಿಂತಿದೆ” ಎಂದು ಹೇಳಿದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi