ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಭಾನುವಾರ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ, ಗ್ರಾಮ ಪಂಚಾಯಿತಿ, ಗ್ರಾಮಸ್ಥರು ಹಾಗೂ ರೋಟರಿ ಬೆಂಗಳೂರು ಮಹಾಲಕ್ಷ್ಮಿ ಸೆಂಟ್ರಲ್ ಸಹಯೋಗದೊಂದಿಗೆ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರೋಟರಿ ಬೆಂಗಳೂರು ಮಹಾಲಕ್ಷ್ಮಿ ಸೆಂಟ್ರಲ್ ಅಧ್ಯಕ್ಷ ಆರ್.ಮಹೇಂದ್ರ ಮಾತನಾಡಿದರು.
ದೈಹಿಕವಾಗಿ ಡಾ.ರಾಜ್ ಕುಮಾರ್ ಅವರು ನಮ್ಮನ್ನು ಅಗಲಿದರೂ ಅವರು ಸದಾ ನಮ್ಮೊಂದಿಗಿದ್ದಾರೆ. ಇದಕ್ಕೆ ನಿದರ್ಶನವೇ ಈ ಉಚಿತ ಆರೋಗ್ಯ ತಪಾಸಣಾ ಶಿಬಿರ. ಅಣ್ಣಾವ್ರ ನೆನಪುಗಳು, ಆದರ್ಶಗಳು ಸಾಮಾಜಿಕ ಕಾರ್ಯಗಳ ಮೂಲಕ ಕಾಣಿಸುತ್ತಿವೆ ಎಂದು ಅವರು ತಿಳಿಸಿದರು.
ನಮ್ಮ ಪ್ರೀತಿಪಾತ್ರರ ನೆನಪಿನಲ್ಲಿ ಮಾಡುವ ಸತ್ಕಾರ್ಯಗಳು, ಪರೋಪಕಾರಿ ಕಾರ್ಯಗಳು ಸಾರ್ಥಕತೆ ಪಡೆಯುತ್ತವೆ. ಮೇಲೂರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ದಂತ ಚಿಕಿತ್ಸೆ, ಕ್ಯಾನ್ಸರ್ ತಪಾಸಣೆ, ಕಣ್ಣಿನ ಚಿಕಿತ್ಸೆ ಮತ್ತು ಕನ್ನಡಗಳ ವಿತರಣೆ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ಗ್ರಾಮಸ್ಥರು ಅತ್ಯುತ್ತಮವಾಗಿ ಸ್ಪಂದಿಸಿದ್ದಾರೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಮಾತನಾಡಿ, ಗ್ರಾಮ ಪಂಚಾಯಿತಿ ವತಿಯಿಂದ ಜನರ ಆರೋಗ್ಯಕ್ಕೂ ಹೆಚ್ಚು ಒತ್ತು ನೀಡಿದ್ದೇವೆ. ಎಲ್ಲರ ಸಹಕಾರದೊಂದಿಗೆ ಅಣ್ಣಾವ್ರ ಜನ್ಮದಿನದ ಪ್ರಯುಕ್ತ ಈ ದಿನ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದೇವೆ. ಹಲವಾರು ಮಂದಿ ಸ್ವಯಂಪ್ರೇರಿತರಾಗಿ ತಮ್ಮ ಕಣ್ಣು ದಾನಕ್ಕೆ ನೋಂದಾಯಿಸಿದ್ದಾರೆ. 120 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದ್ದಾರೆ ಎಂದರು.
ರೊಟೇರಿಯನ್ ಡಾ.ಎಸ್.ನಾಗೇಂದ್ರ, ಜಿ.ಶಿವಾನಂದ, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಕೆ.ರವಿಪ್ರಸಾದ್, ಶಿವಕುಮಾರ್, ಎಂ.ಜೆ.ಶ್ರೀನಿವಾಸ್, ಆರ್.ಐ. ಶ್ರೀನಿವಾಸ್, ಗೋಪಾಲ್, ತಿರುಮಲೇಶ್, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಧರ್ಮೇಂದ್ರ, ಸುಧೀರ್, ಸುದರ್ಶನ್, ಎಸ್.ಆರ್.ವೆಂಕಟೇಶ್, ಶ್ರೀನಿವಾಸ್, ವಕೀಲ ಮಂಜುನಾಥ್ ಹಾಜರಿದ್ದರು.