ಗ್ರಾಮೀಣ ಪ್ರದೇಶದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸುವ ಹಲವಾರು ಬಸ್ ತಂಗುದಾಣಗಳು ನಿರ್ವಹಣೆಯ ಕೊರತೆಯಿಂದ ಮೂಲೆಗುಂಪಾಗಿವೆ. ಆದರೆ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಕನ್ನಡ ಅಭಿಮಾನಿಗಳು, ಗ್ರಾಮಸ್ಥರು ಹಾಗೂ ಕನ್ನಡಪರ ಸಂಘಟನೆಗಳು, ವರನಟ ಡಾ.ರಾಜ್‍ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಸೇರಿಕೊಂಡು ಪವರ್ ಸ್ಟಾರ್ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಅವರ ಹೆಸರಿನಲ್ಲಿ ಮಾದರಿ ಬಸ್ ತಂಗುದಾಣವನ್ನು ನಿರ್ಮಿಸಿದ್ದಾರೆ.
ಈ ಬಸ್ ನಿಲ್ದಾಣವನ್ನು ಭಾನುವಾರ ಡಾ.ರಾಜಕುಮಾರ್ ಜನ್ಮ ದಿನದಂದು ಲೋಕಾರ್ಪಣೆ ಮಾಡಲಾಯಿತು.
ಅರಿಶಿನ ಕುಂಕುಮ ಬಣ್ಣದ ಕನ್ನಡಧ್ವಜದ ಬಣ್ಣದಲ್ಲಿ ಕಂಗೊಳಿಸಿರುವ ಬಸ್ ತಂಗುದಾಣ ತನ್ನದೇ ಆದ ರೀತಿಯಲ್ಲಿ ವೈಶಿಷ್ಠತೆಯನ್ನು ಹೊಂದಿದೆ. ಸಿಸಿಟಿವಿ ಕ್ಯಾಮರಾಗಳನ್ನು ಸಹ ಇಲ್ಲಿ ಅಳವಡಿಸಲಾಗಿದೆ. ತಂಗುದಾಣದಲ್ಲಿ ಟೈಲ್ಸ್ ಹಾಕಿ ಅಂದವನ್ನು ಹೆಚ್ಚಿಸಲಾಗಿದೆ. ಒಂದು ಮನೆಗಿಂತಲೂ ಹೆಚ್ಚು ಸುಂದರವಾಗಿ ತಂಗುದಾಣವನ್ನು ಅಭಿವೃದ್ಧಿಗೊಳಿಸಲಾಗಿದ್ದು, ವರನಟ ಡಾ.ರಾಜ್‍ಕುಮಾರ್ ಅವರ ಜನ್ಮ ದಿನದಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹೆಸರಿನ ಮಾದರಿ ಬಸ್ ತಂಗುದಾಣವನ್ನು ಲೋಕಾರ್ಪಣೆಗೊಳಿಸಲಾಗಿದೆ.
ಮಳಮಾಚನಹಳ್ಳಿಯಲ್ಲಿ ವರನಟ ಡಾ.ರಾಜ್‍ಕುಮಾರ್ ಅವರ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರವನ್ನು ಸಹ ಆಯೋಜಿಸಲಾಗಿತ್ತು. ಕನ್ನಡ ಅಭಿಮಾನಿಗಳು ಹಾಗೂ ಡಾ.ರಾಜ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಉತ್ಸಾಹದಿಂದ ಬಸ್ ತಂಗುದಾಣ ಮತ್ತು ಡಾ.ರಾಜ್‍ಕುಮಾರ್ ಅವರ ಜನ್ಮದಿನದ ಕಾರ್ಯಕ್ರಮ ಮತ್ತು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು.
ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಜ್‍ಶೇಖರ್, ಮುನೇಗೌಡ, ರವಿ, ಜಗದೀಶ್, ಕಿಶೋರ್, ಸುನೀಲ್, ಗ್ರಾಮದ ಎಲ್ಲಾ ಸಂಘಟನೆಗಳ ಸದಸ್ಯರು ಹಾಜರಿದ್ದರು.