K Muttukadahalli, Sidlaghatta : ಸಮುದಾಯದ ಆರೋಗ್ಯ ಹಾಗೂ ನೈರ್ಮಲ್ಯವನ್ನು ಕಾಪಾಡುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ ಎಂದು ನಿವೃತ್ತ ಯೋಧ ಎಸ್.ವೆಂಕಟೇಶ್‌ಅಯ್ಯರ್ ಹೇಳಿದರು.
ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಮ್ಮ ಪತ್ನಿ ಪ್ರಭಾವತಿರವರ ಸ್ಮರಣಾರ್ಥ ಕೋವಿಡ್ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಅಮೂಲ್ಯ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರಿಗೆ ಸೀರೆ ಕುಪ್ಪಸ ವಿತರಿಸುವ ಮೂಲಕ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು.
ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಆರೋಗ್ಯ ಸೇವೆಗಳ ಬಗ್ಗೆ ಸಮುದಾಯಕ್ಕೆ ಮಾಹಿತಿ ನೀಡುವುದು ಸೇರಿದಂತೆ ಜನರಿಗೆ ಸಿಗಬೇಕಾದ ಎಲ್ಲಾ ಆರೋಗ್ಯ ಸೇವೆಗಳನ್ನು ಕಲ್ಪಿಸುವ ಮಹತ್ತರ ಕೆಲಸ ನಿರ್ವಹಿಸುವ ಆಶಾ ಕಾರ್ಯಕರ್ತೆಯರ ಸೇವಾ ಮನೋಭಾವನೆ ಗುರುತಿಸಿ ಸರ್ಕಾರ ವೇತನ ಹೆಚ್ಚಿಸುವ ಜೊತೆಗೆ ಅವರ ಕಲ್ಯಾಣಕ್ಕಾಗಿ ಉತ್ತಮ ಯೋಜನೆಗಳನ್ನು ರೂಪಿಸಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಷಣ್ಮುಗಂ ಎಎನ್‌ಎಂ ನಂದಿನಿ. ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಯರಾದ ಹೇಮಾವತಿ, ಮಾಲತಿ ಹಾಜರಿದ್ದರು.