ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿಯ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸದೆ ಅಧ್ಯಕ್ಷರ ಅಪ್ಪಣೆಯನ್ನೂ ಪಡೆಯದೆ ಆತುರಾತುರವಾಗಿ ಸಭೆಯನ್ನು ಮುಗಿಸಲು ಮುಂದಾದಾಗ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ತಿರುಗಿ ಬಿದ್ದರು. ಇದರಿಂದ ಸಭೆಯಲ್ಲಿ ಗದ್ದಲ ಗಲಾಟೆ ನಡೆಯಿತು. ಕೊನೆಗೂ ಸಾರ್ವಜನಿಕರ ಅಹವಾಲು ಪೂರ್ಣವಾಗದೆ ಸಭೆಯನ್ನು ಕಾಟಾಚಾರಕ್ಕೆಂದು ಮಾಡಿ ಮುಗಿಸಲಾಯಿತು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪೇಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವೀರಾಪುರ ವೆಂಕಟೇಶ್ ಮಾತನಾಡಿ, ನಮಗೆ ಗ್ರಾಮ ಸಭೆಯ ಅಜೆಂಡಾವನ್ನು ಕೊಟ್ಟಿಲ್ಲ. ಬಹುತೇಕ ನಾವೆಲ್ಲರೂ ಹೊಸದಾಗಿ ಆಯ್ಕೆಗೊಂಡ ಸದಸ್ಯರಾಗಿದ್ದು, ನಮಗೆ ಸಭೆಗೂ ಒಂದೆರಡು ದಿನ ಮುನ್ನಾ ನಮ್ಮನ್ನು ಕರೆದು ಸಭೆಯಲ್ಲಿ ಚರ್ಚಿಸುವ ವಿಷಯಗಳ ಬಗ್ಗೆ ಮಾಹಿತಿ ಕೊಡಬೇಕಿತ್ತು ಎಂದರು.
ಮಾಜಿ ಸದಸ್ಯ ರೆಡ್ಡಿಸ್ವಾಮಿ ಮಾತನಾಡಿ, 14ನೇ ಹಣಕಾಸು ಯೋಜನೆಯಡಿ ಬಂದ ಅನುದಾನ ಎಷ್ಟು, ಎಲ್ಲೆಲ್ಲಿ ಕೆಲಸ ಮಾಡಿದ್ದೀರಿ ಎಂಬುದರ ಬಗ್ಗೆ ಮಾಹಿತಿ ಕೊಡಿ ಎಂದರೆ, ದೇವರಮಳ್ಳೂರು ವಾಸಿ ಕೇಶವ ಅವರು, ರಸ್ತೆ ಒತ್ತುವರಿಯಾಗಿದ್ದು ತೆರವು ಮಾಡಲು ಅರ್ಜಿ ಕೊಟ್ಟು ಎರಡು ವರ್ಷಗಳಾಗಿವೆ. ಇದುವರೆಗೂ ಏನೂ ಕ್ರಮ ಜರುಗಿಲ್ಲ ಎಂದು ಆಕ್ಷೇಪಿಸಿ, ಯಾವಾಗ ಕ್ರಮ ತೆಗೆದುಕೊಳ್ಳುತ್ತೀರಿ ಹೇಳಿ ಎಂದು ಒತ್ತಾಯಿಸಿದರು.
ಸಭೆಯಲ್ಲಿ ಸಾರ್ವಜನಿಕರು ಕೇಳಿದ ಯಾವೊಂದು ಪ್ರಶ್ನೆಗೂ ಅಧ್ಯಕ್ಷ ಕೆಂಪೇಗೌಡ ಅಥವಾ ಪಿಡಿಒ ಸುಧಾಮಣಿ ಅವರಾಗಲಿ ಉತ್ತರಿಸದೆ ಎಲ್ಲದ್ದಕ್ಕೂ ಮಾಡ್ತೇವೆ ನೋಡ್ತೇವೆ ಎಂದು ಹಾರಿಕೆ ಉತ್ತರ ಕೊಟ್ಟು ಸಭೆಯನ್ನು ಆತುರಾತುರವಾಗಿ ಮುಗಿಸಲು ಮುಂದಾದರು.
ತಕ್ಷಣವೇ ಸಭೆಯಲ್ಲಿದ್ದ ಸಾರ್ವಜನಿಕರು ಪಿಡಿಒ, ಕಾರ್ಯದರ್ಶಿ ವಿರುದ್ಧ ಮುಗಿಬಿದ್ದರು. ಅಧ್ಯಕ್ಷರನ್ನು ಕೇವಲ ಉತ್ಸವ ಮೂರ್ತಿಗಳಂತೆ ಕುಳ್ಳರಿಸಿ ನೀವು ದರ್ಬಾರ್ ಮಾಡಲು ಬಂದಿದ್ದೀರೇನು, ಅಧ್ಯಕ್ಷರ ಅಪ್ಪಣೆ ಇಲ್ಲದೆ ನೀವು ಸಭೆಯನ್ನು ಮುಗಿಸುವುದಾದರೆ ಇನ್ನು ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಇರುವುದಾದರೂ ಏಕೆಂದು ಅಧಿಕಾರಿಗಳ ಕಾರ್ಯವೈಖರಿ ವಿರುದ್ದ ಹರಿಹಾಯ್ದರು.
ನೋಡಲ್ ಅಧಿಕಾರಿ ರಮೇಶ್ ಅವರನ್ನು ಸಹ ತರಾಟೆಗೆ ತೆಗೆದುಕೊಂಡು ನೀವು ಅಧ್ಯಕ್ಷರಿಗೆ ಅಪಮಾನ ಮಾಡುವ ಮೂಲಕ ಪಂಚಾಯಿತಿ ವ್ಯಾಪ್ತಿಯ 6 ಸಾವಿರ ಮಂದಿಗೆ ಅಪಮಾನ ಮಾಡಿದಂತೆ ಎಂದು ಕಿಡಿಕಾರಿದರು. ಇದರಿಂದ ಸಭೆಯಲ್ಲಿ ಗದ್ದಲ ಗಲಾಟೆ ನಡೆಯಿತು. ನಂತರ ಮತ್ತೆ ಗ್ರಾಮ ಸಭೆಯನ್ನು ಮುಂದುವರೆಸಲಾಯಿತು.
ಸಭೆಯಲ್ಲಿ ಸರಿಯಾಗಿ ಮಾಹಿತಿ ನೀಡದ ಬಗ್ಗೆ ಅಧ್ಯಕ್ಷ ಕೆಂಪೇಗೌಡ ಅವರನ್ನು ಪ್ರಶ್ನಿಸಿದ್ದಕ್ಕೆ ಗ್ರಾಮ ಸಭೆ ನಡೆಯುವ ದಿನಾಂಕವನ್ನು ಗೊತ್ತುಪಡಿಸುವುದನ್ನು ಬಿಟ್ಟು ಮಿಕ್ಕಂತೆ ಯಾವ ಮಾಹಿತಿಯನ್ನೂ ನನಗೆ ಕೊಟ್ಟಿಲ್ಲ, ಸಭೆಯಲ್ಲಿ ಮಂಡನೆಯಾಗುವ ಯಾವ ವಿಷಯವನ್ನೂ ನನ್ನ ಬಳಿ ಅಧಿಕಾರಿಗಳು ಚರ್ಚಿಸಿಯೇ ಇಲ್ಲ ಎಂದು ಅವರೂ ಸಹ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.