Devaguttahalli, Sidlaghatta : ಸಹಕಾರ ಸಂಘಗಳ ಮೂಲಕ ಗ್ರಾಮಗಳ ಅಭಿವೃದ್ದಿ ಸಾಧ್ಯವಾಗಲಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತಾಗಬೇಕೆಂದು ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಕೋ-ಆರ್ಡಿನೇಟರ್ ರಾಜೀವ್‌ಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ದೇವಗುಟ್ಟಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಹಾಗೂ ಇತರೆ ನಿರ್ದೇಶಕರನ್ನು ಅಭಿನಂದಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ಕೃಷಿಕರ ಹಾಗೂ ಎಲ್ಲ ವರ್ಗದವರ ಅಭಿವೃದ್ದಿಯಲ್ಲಿ ಸಹಕಾರ ಸಂಘಗಳು ತನ್ನದೇ ಆದ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಸಹಕಾರ ಸಂಘಗಳಲ್ಲಿ ಹೆಚ್ಚಿನ ಪ್ರಜ್ಞಾವಂತರು, ಯುವಕರು ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಆದರೆ ಇತ್ತೀಚಿನ ದಿನಗಳಲ್ಲಿ ಸಹಕಾರ ಸಂಘಗಳಲ್ಲೂ ರಾಜಕೀಯ, ಗುಂಪುಗಾರಿಕೆ ಅಗತ್ಯಕ್ಕಿಂತಲೂ ಹೆಚ್ಚು ಬೆರೆಯುತ್ತಿರುವ ಕಾರಣ ಸಹಕಾರ ಸಂಘಗಳು ನಿರೀಕ್ಷಿತ ಮಟ್ಟದಲ್ಲಿ ಬೆಳೆಯುತ್ತಿಲ್ಲದಿರುವುದು ಬೇಸರದ ಸಂಗತಿಯಾಗಿದೆ ಎಂದು ತಿಳಿಸಿದರು.
ಡೇರಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿರುವ ನೀವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಡೇರಿಯ ಹಾಗೂ ಹಾಲು ಉತ್ಪಾದಕರ ಹಿತಕ್ಕಾಗಿ ಶ್ರಮಿಸಬೇಕು, ಅಕಾರ ಶಾಶ್ವತವಲ್ಲ ನೀವು ಮಾಡುವ ಕೆಲಸ ಶಾಶ್ವತ ಎಂಬುದನ್ನು ನಿರೂಪಿಸಬೇಕೆಂದು ಮನವಿ ಮಾಡಿದರು.
ದೇವಗುಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ವಿ.ಎನ್.ಲಕ್ಷ್ಮಿದೇವಮ್ಮ ಅವರನ್ನು ಅಭಿನಂದಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾರಾಜೀವ್‌ಗೌಡ, ಮುಖಂಡರಾದ ದಿಬ್ಬೂರಹಳ್ಳಿ ಡಿ.ಪಿ.ನಾಗರಾಜ್, ತಿಮ್ಮಸಂದ್ರ ದೇವರೆಡ್ಡಿ, ಆನಂದರೆಡ್ಡಿ, ದೇವಗುಟ್ಟಹಳ್ಳಿ ಶಿವಾರೆಡ್ಡಿ, ವೆಂಕಟರೆಡ್ಡಿ, ಪೆಮ್ಮರೆಡ್ಡಿ, ಚಿಕ್ಕಪ್ಪಯ್ಯ, ಚಿಕ್ಕನರಸಿಂಹಪ್ಪ ಹಾಜರಿದ್ದರು.