ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ರಸ್ತೆಯಲ್ಲಿರುವ ಇಂಡಿಯನ್ ಪ್ಯಾಲೆಸ್ ಫಂಕ್ಷನ್ ಹಾಲ್ ನಲ್ಲಿ ಶುಕ್ರವಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಶಿಡ್ಲಘಟ್ಟ ಶಾಖೆಯ ವತಿಯಿಂದ ಆಯೋಜಿಸಿದ್ದ ಸಣ್ಣ ಮತ್ತು ಅತೀ ಸಣ್ಣ ಭೂ ಇಡುವಳಿದಾರರಿಗೆ ಸಾಲ ಒದಗಿಸುವ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಕಳೆದ ಎರಡು ವರ್ಷಗಳಿಂದ ರೈತರಿಗೆ ಪ್ರಕೃತಿಯು ವಿರೋಧವಾಗಿ ಇದೆ. ರೈತರ ಖರ್ಚು ವೆಚ್ಚ ಅಧಿಕವಾಗಿದೆ. ಮುಖ್ಯವಾಗಿ ರೈತರು ಬೆಳೆಯುವ ಬೆಳೆಗಳಿಗೆ ರಸ ಗೊಬ್ಬರಗಳು ಹಾಗೂ ಔಷಧಿಗಳನ್ನು ಡಿಸಿಸಿ ಬ್ಯಾಂಕ್ ತನ್ನ ಜೊತೆಯಿರುವ ವಿವಿಧ ಸಹಕಾರಿ ಸಂಘಗಳ ಮೂಲಕ ಮಳಿಗೆಗಳನ್ನು ತೆರೆದು ರೈತರಿಗೆ ಅನುಕೂಲವಾಗುವ ಹಾಗೆ ಸಬ್ಸಿಡಿ ದರದಲ್ಲಿ ವಿತರಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ತಿಳಿಸಿದರು.
ನಷ್ಟದಲ್ಲಿದ್ದ ಕೋಲಾರ ಡಿಸಿಸಿ ಬ್ಯಾಂಕ್ ಅನ್ನು ಅತಿ ಕಡಿಮೆ ಅವಧಿಯಲ್ಲಿ ದೇಶದಲ್ಲಿಯೇ ಮಾದರಿ ಬ್ಯಾಂಕನ್ನಾಗಿ ರೂಪಿಸಿದ ಕೀರ್ತಿ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಗೋವಿಂದಗೌಡ ಸೇರಿದಂತೆ ಅವರ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರಿಗೆ ಸಲ್ಲುತ್ತದೆ. ರೈತರು ಮತ್ತು ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡುವ ಮೂಲಕ ಬ್ಯಾಂಕ್ ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ಕೆಲಸವನ್ನು ಮಾಡುತ್ತಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮಾತನಾಡಿ, ವಿವಿಧ ಸಹಕಾರಿ ಸಂಘಗಳ ಮೂಲಕ ಇದುವರೆಗೂ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 150 ಕೋಟಿ ರೂಗಳಷ್ಟು ಸಾಲ ವಿತರಿಸಿದ್ದು ಮುಂಬರುವ ದಿನಗಳಲ್ಲಿ 200 ಕೋಟಿ ಸಾಲ ವಿತರಿಸಲಾಗುವುದು. ಖಾಸಗಿ ಬಡ್ಡಿ ಮಾಫಿಯಾದಿಂದ ಬಡ ರೈತರನ್ನು ಮತ್ತು ತಾಯಂದಿರನ್ನು ಕಾಪಾಡುವುದೇ ನಮ್ಮ ಉದ್ದೇಶ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ನಿರ್ದೇಶಕರಾದ ನಾಗನಾಳ ಸೋಮಣ್ಣ, ಮೋಹನ್, ಎಸ್.ಎಫ್.ಸಿ.ಎಸ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್, ರಾಮಚಂದ್ರಪ್ಪ, ಮುನಿರಾಜು, ಡಿ.ಎಸ್.ಎನ್.ರಾಜು, ವ್ಯವಸ್ಥಾಪಕ ಆನಂದ್, ಮುಖಂಡರಾದ ಕೆ.ಗುಡಿಯಪ್ಪ, ಸುಬ್ರಮಣಿ, ಭಕ್ತರಹಳ್ಳಿ ಮುನೇಗೌಡ, ಡಿ.ವಿ.ವೆಂಕಟೇಶ್ ಹಾಜರಿದ್ದರು.