Sidlaghatta : ರಾಜ್ಯದ 224 ಕ್ಷೇತ್ರಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ, ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರು ಗೆಲ್ಲುವ ಮೂಲಕ ರೈತರ ಧ್ವನಿಯಾಗಿ ಹೊರಹೊಮ್ಮಿರುವುದು ಇಡೀ ರಾಜ್ಯದ ರೈತರಿಗೆಲ್ಲಾ ಹೆಮ್ಮೆಯ ಸಂಗತಿ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರ ಗೆಲುವನ್ನು ಸಂಭ್ರಮಿಸಿ, ಸಿಹಿ ಹಂಚಿ ಅವರು ಮಾತನಾಡಿದರು.
ರೈತಸಂಘ, ಕರ್ನಾಟಕ ಸರ್ವೋದಯ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರು ರಾಜ್ಯದ ಏಕೈಕ ಯುವ ರೈತ ಪ್ರತಿನಿಧಿಯಾಗಿ ವಿಧಾನಸೌಧಕ್ಕೆ ಪ್ರವೇಶ ಪಡೆದಿದ್ದಾರೆ.
2005ರ ಬಸವ ಜಯಂತಿಯ ದಿನ ಲೇಖಕ ದೇವನೂರ ಮಹದೇವ ಅವರ ಅಧ್ಯಕ್ಷತೆಯಲ್ಲಿ ಹುಟ್ಟಿದ ಸರ್ವೋದಯ ಕರ್ನಾಟಕ ಪಕ್ಷ ಕೇವಲ ಇಬ್ಬರು ಶಾಸಕರನ್ನು ಕಂಡಿದೆ. ಅವರಿಬ್ಬರೂ ತಂದೆ– ಮಗ ಎಂಬುದು ವಿಶೇಷ. 2013ರಲ್ಲಿ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದಿಂದ ಗೆದ್ದಿದ್ದರು. ಅವರ ಪುತ್ರ ದರ್ಶನ್ ಅಲ್ಲಿಂದಲೇ ಆಯ್ಕೆಯಾಗಿದ್ದಾರೆ. ಈಗಿನ ಗೆಲುವು ಹಲವು ಬಣಗಳಾಗಿ ಒಡೆದು ಹೋಗಿರುವ ರೈತಸಂಘಕ್ಕೆ ಶಕ್ತಿ ತುಂಬಿದಂತಾಗಿದೆ ಎಂದು ಹೇಳಿದರು.
ರೈತ ಸಂಘದ ಸದಸ್ಯರು ಹಾಜರಿದ್ದರು.