ಚಿತ್ರದುರ್ಗ ಮೂಲದ 23 ವರ್ಷದ ಡಿ.ಟಿ.ಸುದರ್ಶನ “ಸರ್ಕಾರಿ ಶಾಲೆ ಕಾಲೇಜುಗಳನ್ನು ಉಳಿಸಿ” ಎಂಬ ಸಂದೇಶ ಸಾರುತ್ತಾ, ಮೂರು ರಾಷ್ಟ್ರಗಳ ಪಾದಯಾತ್ರೆ ಕೈಗೊಂಡಿದ್ದಾನೆ. ಭಾರತದ ದಕ್ಷಿಣ ತುದಿಯಿಂದ ಉತ್ತರದ ನೇಪಾಳ ಮತ್ತು ಭೂತಾನ್ ದೇಶಗಳೆಡೆಗೆ ಒಬ್ಬನೇ ಸಾಗುತ್ತಿರುವ ಈ ಯುವ ಸೈಕಲಿಸ್ಟ್ ನನ್ನು ಸಾಮಾಜಿಕ ತಾಣದಲ್ಲಿ ಗಮನಿಸಿದ ಶಿಡ್ಲಘಟ್ಟದ ರಾಕೇಶ್ ಶಿಡ್ಲಘಟ್ಟದಲ್ಲಿ ಆತಿಥ್ಯ ನೀಡಿದ್ದಾರೆ.
2021 ರ ಆಗಸ್ಟ್ 18 ರಂದು ಬೆಂಗಳೂರಿನಿಂದ ಸೈಕಲ್ ಯಾತ್ರೆ ಪ್ರಾರಂಭಿಸಿರುವ ಡಿ.ಟಿ.ಸುದರ್ಶನ, ದೇಶದ ಪ್ರತಿಯೊಂದು ಜಿಲ್ಲೆಯನ್ನೂ ಮುಟ್ಟುವ ಗುರಿಯಿರಿಸಿಕೊಂಡಿದ್ದಾರೆ. ಈಗಾಗಲೇ ತಮಿಳುನಾಡಿನ 38 ಜಿಲ್ಲೆಗಳು, ಕೇರಳದ 14 ಜಿಲ್ಲೆಗಳು, ಪಾಂಡಿಚೆರಿಯ 2 ಜಿಲ್ಲೆಗಳು ಮತ್ತು ಕರ್ನಾಟಕದಲ್ಲಿ 10 ಜಿಲ್ಲೆಗಳನ್ನು ನೋಡಿ ಬಂದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬ್ರಹ್ಮಗಿರಿಬೆಟ್ಟ ಮತ್ತು ವಿದುರಾಶ್ವತ್ಥವನ್ನು ನೋಡಿದ್ದಾರೆ.
ಒಂದೊಂದು ಜಿಲ್ಲೆಯಲ್ಲಿಯೂ ಅಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಸರ್ಕಾರಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ತಲುಪಿಸುತ್ತಾ ಬಂದಿರುವ ಅವರು, ಕರ್ನಾಟಕದಲ್ಲಿ ಸರ್ಕಾರಿ ಶಾಲಾ ಕಾಲೇಜುಗಳನ್ನು ಉಳಿಸಬೇಕು. ಬಜೆಟ್ ನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಮೀಸಲಿಡುತ್ತಿವ ಹಣ ಕಡಿಮೆಯಾಗುತ್ತಿದೆ ಎಂದು ಜನಸಾಮಾನ್ಯರು, ವಿದ್ಯಾರ್ಥಿಗಳು ಮುಂತಾದವರಿಂದ ಮುಖ್ಯಮಂತ್ರಿಗೆ ಪತ್ರ, ಇಮೇಲ್, ಟ್ವೀಟ್ ಮಾಡಿಸಿದ್ದಾರೆ. ಕರ್ನಾಟಕದಲ್ಲಿ 41 ಸಾವಿರ ಶಿಕ್ಷಕರ ಕೊರತೆಯಿದೆ ಎಂದು ಸರ್ಕಾರವೇ ಹೇಳುತ್ತದೆ. 14 ಸಾವಿರ ಮಂದಿ ಅತಿಥಿ ಉಪನ್ಯಾಸಕರು ಬೀದಿಗಿಳಿದು ಹೋರಾಡುತ್ತಿದ್ದಾರೆ. ಈ ಸಮಸ್ಯೆ ಪರಿಹಾರವಾಗಬೇಕಾದರೆ ಸರ್ಕಾರ ಬಜೆಟ್ ನಲ್ಲಿ ಶಿಕ್ಷಣಕ್ಕಾಗಿ ಹೆಚ್ಚು ಹಣ ಮೀಸಲಿಡಬೇಕು ಎಂದು ಅವರು ತಿಳಿಸಿದರು.
ಚಿತ್ರದುರ್ಗದ ಬಳಿಯ ಹನುಮನಹಳ್ಳಿಯ ತಿಪ್ಪೇಸ್ವಾಮಿ ಮತ್ತು ಗಿರಿಜಮ್ಮ ದಂಪತಿಯ ಮಗ ಡಿ.ಟಿ.ಸುದರ್ಶನ, ಕರ್ನಾಟಕ ಓಪನ್ ಯೂನಿವರ್ಸಿಟಿಯಲ್ಲಿ ಬಿ.ಎ ಓದುತ್ತಿದ್ದಾರೆ. ಅಂದಾಜು ನಾಲ್ಕು ವರ್ಷಗಳಲ್ಲಿ ಮೂರು ದೇಶಗಳ ಯಾತ್ರೆಯನ್ನು ಪೂರೈಸುವ ವಿಶ್ವಾಸ ಅವರದ್ದು.
“ನನ್ನ ಬಳಿ ಟೆಂಟ್ ಇದೆ. ಸಾಮಾನ್ಯವಾಗಿ ದೇವಸ್ಥಾನ, ಚರ್ಚ್, ಪೆಟ್ರೋಲ್ ಬಂಕ್ ಗಳಲ್ಲಿ ಅನುಮತಿ ಪಡೆದು ಅಲ್ಲಿ ಟೆಂಟ್ ಹಾಕಿ ಮಲಗುವೆ. ಇಲ್ಲದಿದ್ದರೆ ರಸ್ತೆ ಬದಿಯಲ್ಲೇ ಟೆಂಟ್ ಹಾಕಿಕೊಳ್ಳುವೆ” ಎನ್ನುವರು ಸುದರ್ಶನ.
ಸಾಮಾಜಿಕ ತಾಣದಲ್ಲಿ ನಾನು ಹೋದ ಪ್ರತಿಯೊಂದು ಸ್ಥಳದ ಚಿತ್ರಗಳನ್ನು ಹಾಕುತ್ತಿರುತ್ತೇನೆ. ಅಲ್ಲಿ ನನ್ನನ್ನು ಗಮನಿಸುವವರು ಅನೇಕ ಮಂದಿಯಿದ್ದಾರೆ. ದಾರಿಯುದ್ದಕ್ಕೂ ಸ್ವಯಂಪ್ರೇರಿತರಾಗಿ ಈ ರೀತಿಯ ಸ್ನೇಹಿತರು ಊಟ, ತಿಂಡಿ, ಹಣ ಕೊಟ್ಟು, ಆತಿಥ್ಯ ನೀಡಿ ಸಹಕರಿಸುತ್ತಿದ್ದಾರೆ. ನಮ್ಮಲ್ಲಿ ಒಳ್ಳೆಯ ಮನಸ್ಸುಗಳು ಹೆಚ್ಚಿವೆ ಎಂಬುದನ್ನು ಈ ಯಾತ್ರೆ ನನಗೆ ತಿಳಿಸಿಕೊಟ್ಟಿದೆ ಎಂದು ಹೇಳಿದರು.