Melur, Sidlaghatta : ಸಮಾಜದಲ್ಲಿ ವಿಕಲಚೇತನರನ್ನು ನೋಡುವ ದೃಷ್ಟಿ ಬದಲಾಗಬೇಕು. ಸಮಾಜದಲ್ಲಿ ಎಲ್ಲರಂತೆ ಅವರಿಗೂ ಅವರ ಇಚ್ಚೆ ಕೌಶಲ್ಯ ಆಸಕ್ತಿಗೆ ಅನುಗುಣವಾಗಿ ಅವಕಾಶಗಳನ್ನು ಒದಗಿಸಿಕೊಡುವ ಕೆಲಸ ಸರ್ಕಾರದಿಂದ ಹಾಗೂ ಸಮಾಜದಿಂದ ಆಗಬೇಕಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಕ್ಷೇತ್ರದ ಮೂವರು ವಿಕಲಚೇತನರಿಗೆ ಸಿ.ಎಸ್.ಆರ್ ಅನುದಾನದಲ್ಲಿ ತ್ರಿಚಕ್ರ ವಾಹನಗಳನ್ನು ತಮ್ಮ ನಿವಾಸದ ಆವರಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿತರಿಸಿ ಅವರು ಮಾತನಾಡಿದರು.
ಇದೆಲ್ಲದಕ್ಕೂ ಮೊದಲು ವಿಕಲಚೇತನರ ಮನೆಗಳಲ್ಲಿ ಅವರ ಪೋಷಕರು, ನೆರೆ ಹೊರೆಯವರು ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸ ಮಾಡಬೇಕು. ನಕಾರಾತ್ಮಕ ಚಿಂತನೆಗಳನ್ನು ಬಿಟ್ಟು ಧನಾತ್ಮಕ ಚಿಂತನೆಗಳನ್ನು ಬೆಳೆಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಸಮಾಜದಲ್ಲಿ ಎಲ್ಲರಂತೆ ಅವರೂ ಸಹ ಮುಖ್ಯವಾಹಿನಿಯಲ್ಲಿ ಸಾಗುವಂತೆ ಅವರಲ್ಲಿ ಕೌಶಲ್ಯವನ್ನು ಬೆಳೆಸುವ ಚಟುವಟಿಕೆಗಳಿಗೆ ಸರ್ಕಾರ, ಸಂಘ ಸಂಸ್ಥೆ, ಸಮುದಾಯವು ಉತ್ತೇಜಿಸಬೇಕು. ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕೆಂದು ಆಶಿಸಿದರು.
ಸಿ.ಎಸ್.ಆರ್ ಅನುದಾನದಲ್ಲಿ ಖರೀದಿಸಿ ಮೂರು ತ್ರಿಚಕ್ರ ವಾಹನಗಳನ್ನು ಕ್ಷೇತ್ರ ವ್ಯಾಪ್ತಿಯ ವಿಕಲಚೇತನರಿಗೆ ವಿತರಿಸಿದರು. ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಿತ್ತಲಹಳ್ಳಿ ವೆಂಕಟೇಶ್, ಮಾಜಿ ಉಪಾಧ್ಯಕ್ಷ ವಿಜಯೇಂದ್ರ, ರೈತ ಸಂಘದ ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ತಾದೂರು ರಘು ಹಾಜರಿದ್ದರು.