
ಎಲ್ಲೆಡೆ ಕೊರೊನಾ ಕುರಿತಾಗಿ ಅವ್ಯಕ್ತ ಭಯ ಕಾಡುತ್ತಿದೆ. ಇದರ ನಡುವೆ ಕೊರೊನಾ ಸೋಂಕು ತಗುಲಿದ್ದ ಶಿಡ್ಲಘಟ್ಟ ತಾಲ್ಲೂಕಿನ ಯಣ್ಣೂರು ಗ್ರಾಮದ 107 ವರ್ಷದ ಹಿರಿಯಜ್ಜಿ ಕಾಳಮ್ಮ ಸೋಂಕಿನ ವಿರುದ್ಧ ಹೋರಾಡಿ ಸಂಪೂರ್ಣ ಗುಣಮುಖರಾಗಿ ಸ್ವಗ್ರಾಮಕ್ಕೆ ಹಿಂದಿರುಗಿದ್ದಾರೆ.
ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಕೊರೊನಾ ಸೋಂಕನ್ನು ಜಯಿಸಿದ್ದ ಚಿತ್ರದುರ್ಗ ಮೂಲದ ಸಿದ್ಧಮ್ಮ (110) ಎಂಬುವವರು ರಾಜ್ಯದಲ್ಲಿಯೇ ಈ ಸೋಂಕನ್ನು ಗೆದ್ದಿದ್ದ ಹಿರಿಯರಾಗಿದ್ದರು. ಅವರ ನಂತರದ ಸ್ಥಾನವನ್ನು ಇದೀಗ ಶಿಡ್ಲಘಟ್ಟ ತಾಲ್ಲೂಕಿನ ಯಣ್ಣೂರಿನ ಕಾಳಮ್ಮ ತಮ್ಮದಾಗಿಸಿಕೊಂಡಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ 20 ದಿನಗಳ ಕಾಲ ಚಿಕಿತ್ಸೆ ಪಡೆದ ಕಾಳಮ್ಮ, ವೈದ್ಯರ ನೆರವು ಹಾಗೂ ತಮ್ಮ ಇಚ್ಛಾಶಕ್ತಿಯಿಂದ ಸೋಂಕಿನ ವಿರುದ್ಧ ಹೋರಾಡಿ ಗುಣಮುಖರಾಗಿ ಆತ್ಮವಿಶ್ವಾಸದಿಂದ ಮನೆಗೆ ಬಂದಿದ್ದಾರೆ.
“ಆಧಾರ್ ಕಾರ್ಡ್ ಪ್ರಕಾರ ನಮ್ಮ ಅಜ್ಜಿಗೆ 104 ವರ್ಷ ವಾದರೂ ಅವರ ನಿಜವಾದ ವಯಸ್ಸು 107 ವರ್ಷ. ಕಳೆದ ತಿಂಗಳ ಕೊನೆಯಲ್ಲಿ ಅಜ್ಜಿಗೆ ಜ್ವರ ಬಂತು. ನನ್ನ ಚಿಕ್ಕಪ್ಪ ಡಾ.ಶಂಕರ್ ಅವರ ಮಾರ್ಗದರ್ಶನದಲ್ಲಿ ಮನೆಯಲ್ಲಿಯೇ ಔಷದೋಪಚಾರ ಮಾಡಿದೆವು. ಜ್ವರ ಕಡೆಮೆ ಆಗದಿದ್ದುದಕ್ಕೆ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ಸೇರಿಸಿದೆವು. ಅಲ್ಲಿ ಪರೀಕ್ಷೆ ಮಾಡಿಸಿದಾಗ ಕೋವಿಡ್ ಪಾಸಿಟೀವ್ ಎಂದು ತಿಳಿಯಿತು. ನಂತರ ನಾವು ಕುಟುಂಬದವರೆಲ್ಲಾ ಪರೀಕ್ಷೆ ಮಾಡಿಸಿಕೊಂಡೆವು. ನಮ್ಮದೆಲ್ಲಾ ನೆಗೆಟಿವ್ ಬಂತು. ಅಜ್ಜಿಗೆ ವಾಸಿಯಾಯಿತಾದರೂ ಸುಸ್ತಾಗಿದ್ದುದರಿಂದ ಐದು ದಿನಗಳು ಹೆಚ್ಚಾಗಿಯೇ ಆಸ್ಪತ್ರೆಯಲ್ಲಿರಿಸಿಕೊಂಡರು. ಆಗ, ನನ್ನನ್ನು ಮನೆಗೆ ಕರೆದುಕೊಂಡು ಹೋಗಿ, ಮುದ್ದೆ ತಿನ್ನಬೇಕು ಎನ್ನುತ್ತಿದ್ದರು ಅಜ್ಜಿ. ಮೂರು ದಿನಗಳ ಹಿಂದೆ ಮನೆಗೆ ಕರೆದುಕೊಂಡು ಬಂದೆವು. ಈಗ ಮನೆಯಲ್ಲಿಯೇ ಚೇತರಿಸ್ಕೊಳ್ಳುತ್ತಿದ್ದಾರೆ ವೀಲ್ ಚೇರ್ ಮೇಲೆ ಕುಳ್ಳರಿಸಿ ಓಡಾಡಿಸುತ್ತಿದ್ದೇವೆ.” ಎಂದು ಗ್ರಾಮ ಪಂಚಾಯಿತಿ ಸದಸ್ಯ ಯಣ್ಣೂರು ನಾಗರಾಜ್ ತಿಳಿಸಿದರು.