Home News ಕೊರೊನಾ ಮುಕ್ತ ಗ್ರಾಮವಾದ ಶಿಡ್ಲಘಟ್ಟದ ಸುಗಟೂರು

ಕೊರೊನಾ ಮುಕ್ತ ಗ್ರಾಮವಾದ ಶಿಡ್ಲಘಟ್ಟದ ಸುಗಟೂರು

0

ಕೊರೊನಾ ಎರಡನೇ ಅಲೆಯು ಪ್ರತಿ ಹಳ್ಳಿ, ಗ್ರಾಮಗಳಿಗೂ ಬಂದು ಅನೇಕರನ್ನು ಸಂಕಷ್ಟಕ್ಕೀಡು ಮಾಡಿದೆ. ಜಿಲ್ಲೆಯಾದ್ಯಂತ ಕೊರೊನಾ ಮುಕ್ತವಾಗಿಸಲು ಸರ್ಕಾರ, ಜಿಲ್ಲಾಡಳಿತ ಶ್ರಮಿಸುತ್ತಿದೆ.

ತಾಲ್ಲೂಕಿನ ಜಂಗಮಕೋಟೆ ಹೋಬಳಿ, ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಗಟೂರು ಗ್ರಾಮದಲ್ಲಿ ಕೊರೊನಾ ಸಾಕಷ್ಟು ತನ್ನ ಕಬಂಧಬಾಹುಗಳನ್ನು ಚಾಚಿದ್ದರೂ ಗ್ರಾಮಮಟ್ಟದ ಕಾರ್ಯಪಡೆಯ ಶ್ರಮದಿಂದಾಗಿ ಸುಮಾರು 20 ದಿನಗಳ ಹಿಂದೆಯೇ ಗ್ರಾಮವು ಕೊರೋನಾಮುಕ್ತವಾಗಿದೆ.

30 ಕ್ಕೂ ಹೆಚ್ಚು ಕೇಸ್‌ಗಳು:

ಸುಮಾರು 400 ಕುಟುಂಬಗಳು, 1990 ಜನಸಂಖ್ಯೆಯುಳ್ಳ ಸುಗಟೂರು ಗ್ರಾಮದಲ್ಲಿ 45 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಸುಮಾರು 650, 18 ವರ್ಷದಿಂದ 45 ವರ್ಷದವರೆಗಿನ 1000 ಕ್ಕೂ ಹೆಚ್ಚುಮಂದಿ ಇದ್ದು, ಸುಮಾರು 450 ಮಂದಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.

ಗ್ರಾಮದಲ್ಲಿ ಸುಮಾರು 350 ಮಂದಿಗೆ ಕೊರೊನಾ ವಿರುದ್ಧದ ಲಸಿಕೆ ಹಾಕಲಾಗಿದ್ದು, 2021ರ ಮಾರ್ಚಿ 28 ರಂದು ಪ್ರಥಮ ಕೊರೋನಾ ಪಾಸಿಟೀವ್ ಕೇಸ್ ಪತ್ತೆಯಾಯಿತು. ಅಲ್ಲಿಂದ ನಂತರದ ದಿನಗಳಲ್ಲಿ ಪ್ರತಿದಿನವೂ ಕನಿಷ್ಟ ಮೂರ್ನಾಲ್ಕು ಮಂದಿಗೆ ಕೊರೊನಾ ಪಾಸಿಟೀವ್ ಬಂದಿದೆ. ಮೇ-20 ರವರೆಗೆ ಗ್ರಾಮದಲ್ಲಿ ಸುಮಾರು 30 ಕ್ಕೂ ಹೆಚ್ಚುಮಂದಿಗೆ ಸೋಂಕು ತಗುಲಿದ್ದು ಒಂದು ಕೋವಿಡ್, ನಾಲ್ಕು ನಾನ್‌ಕೋವಿಡ್ ಸಾವುಗಳು ಸಂಭವಿಸಿವೆ. ಮೇ-20 ರಿಂದ ಇಲ್ಲಿನವರೆಗೆ ಯಾವುದೇ ಪಾಸಿಟೀವ್ ಕೇಸ್, ಅನಾರೋಗ್ಯದ ಕೇಸ್‌ಗಳು ಪತ್ತೆಯಾಗದೇ ಕಳೆದ 20 ದಿನಗಳ ಹಿಂದೆಯೇ ಗ್ರಾಮವು ಸಂಪೂರ್ಣ ಕೊರೊನಾ ಮುಕ್ತವಾಗಿದೆ.

ಗ್ರಾಮ ಕಾರ್ಯಪಡೆಯ ಶ್ರಮ:

ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಕೊರೊನಾ ಕೇಸ್‌ಗಳ ಹಾವಳಿಯನ್ನು ತಪ್ಪಿಸಲು ಗ್ರಾಮಪಂಚಾಯಿತಿ ಸದಸ್ಯರು, ಶಾಲಾಶಿಕ್ಷಕರು, ಆಶಾಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರನ್ನೊಳಗೊಂಡ ಗ್ರಾಮಕಾರ್ಯಪಡೆಯನ್ನು ರಚಿಸಿಕೊಂಡು ಮನೆಮನೆ ಭೇಟಿ, ಆರೋಗ್ಯಸಲಹೆ, ಜಾಗೃತಿ, ಕೊರೋನಾ ನಿಯಮಗಳ ಪಾಲನೆಯ ಬಗ್ಗೆ ಅರಿವುಮೂಡಿಸುವ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಯಿತು.

ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರನ್ನೊಳಗೊಂಡ ನಾಲ್ಕುಮಂದಿ ಶಿಕ್ಷಕರ ತಂಡವು ಸ್ವಯಂ ಆಸಕ್ತಿಯಿಂದ ಕಾರ್ಯಪಡೆಯಲ್ಲಿ ಸೇರಿಕೊಂಡು ಗ್ರಾಮವನ್ನು ಸುತ್ತಲು ಆರಂಭಿಸಿತು. ಎರಡು ಬ್ಲಾಕ್‌ಗಳಲ್ಲಿ ತಂಡವನ್ನು ಇಬ್ಭಾಗಮಾಡಿಕೊಂಡು ಎಲ್ಲಾ ಕುಟುಂಬದ ಸದಸ್ಯರಿಗೆ ಕೊರೊನಾ ತಡೆಯುವ ಬಗ್ಗೆ ಮನವರಿಕೆ ಮಾಡಿಕೊಟ್ಟಿತು. ಆಗಿಂದಾಗ್ಗೆ ಗ್ರಾಮಪಂಚಾಯಿತಿ ಕಾರ್ಯಪಡೆ ಸಭೆಯಲ್ಲದೇ ಗ್ರಾಮಮಟ್ಟದಲ್ಲಿ ಪಂಚಾಯಿತಿ ಸದಸ್ಯರೊಂದಿಗೆ ಚರ್ಚಿಸಿ ಕ್ರಿಯಾಯೋಜನೆ ರೂಪಿಸಿ ಅನುಷ್ಟಾನಗೊಳಿಸಿದ ಪರಿಣಾಮವಾಗಿ ಯಶಸ್ಸು ಕಾಣಲಾಗಿದೆ.

ಕೊರೊನಾ ಜಾಗೃತಿ ಮೂಡಿಸುವಲ್ಲಿ ಶಿಕ್ಷಕರ ಶ್ರಮ:

ಗ್ರಾಮದಲ್ಲಿ ಮೂರುಬಾರಿ ಸ್ವಾಬ್‌ಟೆಸ್ಟ್ ಆಂದೋಲನ ನಡೆಸಲಾಗಿದೆ. ಆಗಿಂದಾಗ್ಗೆ ಸ್ಯಾನಿಟೈಶೇಷನ್ ಮಾಡಿಸಲಾಗಿದೆ. ಗ್ರಾಮದಲ್ಲಿ ಕೊರೊನಾ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರದ ಆದೇಶಗಳನ್ನು ಪಾಲಿಸಲಾಗಿದ್ದು, ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರ ನೇತೃತ್ವದಲ್ಲಿ ಕಾರ್ಯಪಡೆಯು ಉತ್ತಮ ಕಾರ್ಯ ಮಾಡಿದೆ. ಪ್ರತಿಮನೆಯ ಪ್ರತಿಸದಸ್ಯರಿಗೂ ಕೊರೊನಾ ಜಾಗೃತಿ ಮೂಡಿಸಲಾಗಿದೆ. ಸದ್ಯ ಗ್ರಾಮವು ಕೊರೊನಾ ಮುಕ್ತವಾಗಿದ್ದು ಮೂರನೇ ಅಲೆಯೂ ಗ್ರಾಮಕ್ಕೆ ಬಾರದಂತೆ ಈಗಿನಿಂದಲೇ ಜಾಗೃತಿ ಮೂಡಿಸಲಾಗುತ್ತಿದೆ. ಈಗಿರುವ ಕಾರ್ಯಪಡೆಯು ಇನ್ನೂ ಒಂದುವರ್ಷ ಹೀಗೆಯೇ ತನ್ನ ಕಾರ್ಯಚಟುವಟಿಕೆಗಳನ್ನು ಮುಂದುವರಿಸುವಂತೆ ಚಿಂತಿಸಲಾಗುತ್ತಿದೆ. ಗ್ರಾಮವು ಕೊರೊನಾ ಮುಕ್ತವಾಗುವಲ್ಲಿ ಕಾರ್ಯಪಡೆಯ ಶ್ರಮ, ಕೈಗೊಂಡ ಕ್ರಮಗಳ ಬಗ್ಗೆ ತಾಲ್ಲೂಕು ಟಾಸ್ಕ್‌ಫೋರ್ಸ್ ಅಭಿನಂದಿಸಿರುವುದಕ್ಕೆ ಸಂತೋಷವಾಗುತ್ತಿದೆ ಎನ್ನುತ್ತಾರೆ ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ದೇವರಾಜು.

ವಿಶೇಷ ಅನುಭವ:

ಕಳೆದ ಮೊದಲ ಅಲೆಯ ಕೊರೊನಾ ವೇಳೆಗಿಂತ ಎರಡನೇ ಅವಧಿಯಲ್ಲಿ ಕೊರೊನಾ ವಾರಿಯರ್ ಆಗಿ ಗ್ರಾಮ ಮಟ್ಟದ ಕಾರ್ಯಪಡೆಯಲ್ಲಿ ಕಾರ್ಯನಿರ್ವಹಿಸಿದಾಗ ಸಾಕಷ್ಟು ಅನುಭವಗಳಾಗಿವೆ. ಕೊರೊನಾ ಕೇಸ್ ಬಂದ ಮೊದಲ ದಿನಗಳಲ್ಲಿ ಸ್ವಲ್ಪ ಭಯದಿಂದಲೇ ಸ್ವಯಂ ಆಸಕ್ತಿಯಿಂದ ಜಾಗೃತಿ ಮೂಡಿಸಲು ಮುಂದಾದರೂ ನಂತರದಲ್ಲಿ ನಮ್ಮ ಶಾಲೆಯ ನಾಲ್ಕು ಮಂದಿ ಶಿಕ್ಷಕರನ್ನೊಳಗೊಂಡ ತಂಡ ರಚಿಸಿಕೊಂಡು ಜಾಗೃತಿ ಮೂಡಿಸಲು ಮುಂದಡಿಯಿಟ್ಟೆವು. ಆಗಿಂದಾಗ್ಗೆ ಶಾಲೆಯಿಂದ ಮಕ್ಕಳಿಗೆ ವಿತರಿಸಬೇಕಾದ ದಿನಸಿ, ಬೇಳೆಯನ್ನು ವಿತರಿಸುವಾಗಲೂ ಜಾಗೃತಿ ಮೂಡಿಸಿದೆವು. ಕಳೆದ ಸಾಲಿನ ಪಠ್ಯಪುಸ್ತಕಗಳನ್ನು ಹಿಂಪಡೆದು ಈ ಸಾಲಿಗೆ ಮಕ್ಕಳಿಗೆ ವಿತರಿಸಿ ಓದಲೂ ಪ್ರೇರಣೆ ನೀಡಿದೆವು. ಮನೆಯಲ್ಲಿ ಮಕ್ಕಳನ್ನು ಕೊರೊನಾ ಹಿನ್ನೆಲೆಯಲ್ಲಿ ಆಡಲು ಹೊರಗೆ ಬಿಡದಿರುವುದರಿಂದ ವ್ಯಾಟ್ಸಾಪ್ ಗ್ರೂಪ್ ಮೂಲಕ ಚಟುವಟಿಕೆ, ಪ್ರಯೋಗ, ಚಿತ್ರಕಲೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೇರಣೆ ನೀಡಿದ್ದು ರಜಾ ಅವಧಿಯಲ್ಲಿಯೂ ಮಕ್ಕಳನ್ನು ಕಲಿಕಾ ನಿರಂತರತೆಗೆ ಕೊಂಡೊಯ್ಯಲು, ಕಲಿಕಾ ಕಂದಕವನ್ನು ಕಡಿಮೆಗೊಳಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ.

ಶಿಕ್ಷಕರಿಂದಲೇ ಧೈರ್ಯಬಂತು:

ಮೇ-3 ರಂದು ಕೊರೊನಾ ಪಾಸಿಟೀವ್ ಇರುವುದಾಗಿ ವರದಿ ಬಂತು, ಆರೋಗ್ಯ ತುಂಬಾ ಹದಗೆಟ್ಟಿತ್ತು. ಚಿಕ್ಕಬಳ್ಳಾಪುರದ ಆಸ್ಪತ್ರೆಯಲ್ಲಿ ಮೂರ್ನಾಲ್ಕು ದಿನ ಅಡ್ಮಿಟ್ ಆಗಿದ್ದರೂ ಆರೋಗ್ಯ ಸುಧಾರಿಸಲಿಲ್ಲ. ಎಂದಿಗೂ ದೀರ್ಘ ಕಾಯಿಲೆಯಿಂದ ಆಸ್ಪತ್ರೆ ಮುಖ ಕಾಣದ ನನಗೆ ಅಲ್ಲಿನ ಸಾವುನೋವುಗಳನ್ನು ಕಣ್ಣಾರೆ ಕಂಡು ಭಯವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಊರಿಗೆ ಬಂದು ತೋಟದ ಮನೆಯಲ್ಲಿ ಪ್ರತ್ಯೇಕವಾಗಿ ಇದ್ದೆ. ಅದನ್ನು ತಿಳಿದ ಶಿಕ್ಷಕರ ಮತ್ತು ಗ್ರಾಮಕಾರ್ಯಪಡೆಯ ಸದಸ್ಯರು ಬಂದು ಧೈರ್ಯ ಹೇಳಿದರು. ಕೊರೊನಾ ಸೋಂಕಿತನೆಂದು ಹಿಂಜರಿಯದೇ ಹೊರಗೆ ಕೂರಿಸಿ, ತಪಾಸಣೆ ಮಾಡಿದರು. ಸಾಕಷ್ಟು ಆರೋಗ್ಯ ಸಲಹೆಗಳನ್ನು ನೀಡಿದರು. ಅವರ ಧೈರ್ಯದ ಮಾತುಗಳಿಂದಲೇ ಬಹುಬೇಗ ಕಾಯಿಲೆಯಿಂದ ಹೊರಬಂದೆ. ಸುಮಾರು 20 ದಿನಗಳ ಕಾಲ ಪ್ರತಿದಿನವೂ ತನ್ನನ್ನು ಮಾತನಾಡಿಸಿ ತಪಾಸಣೆ ನಡೆಸಿದ್ದಾರೆ ಎನ್ನುತ್ತಾರೆ ಕೊರೊನಾ ಗೆದ್ದ ಗ್ರಾಮಸ್ಥ ರಮೇಶ್.

ಮಕ್ಕಳ ಕಲಿಕೆಗೆ ಪ್ರೇರಣೆ:

Covid-19 free village Chikkaballapur District sidlaghatta taluk sugaturu

ಮನೆಗಳ ಬಳಿ ಭೇಟಿನೀಡಿದಾಗ ಮಕ್ಕಳು ಕಲಿಯಲು ಅಗತ್ಯ ಮಾಹಿತಿ, ಸಲಹೆಗಳನ್ನು ನೀಡಲಾಗುತ್ತಿದೆ. ಕಳೆದ ಸಾಲಿನ ವಿದ್ಯಾಗಮ, ವಠಾರಶಾಲೆಗಳಿಂದ ಪ್ರೇರಣೆಗೊಂಡಿರುವ ವಿದ್ಯಾರ್ಥಿಗಳು ತಾವೇ ತಮ್ಮ ಮನೆಯ ಬಳಿಯ ದೇವಾಲಯದ ಪ್ರಾಂಗಣ, ವಠಾರಗಳಲ್ಲಿ ಪೋಷಕರ ಸಮ್ಮುಖದಲ್ಲಿ ಕುಳಿತು ಅಧ್ಯಯನ ಮಾಡುತ್ತಿದ್ದಾರೆ. ಕಲಿಕೆಗೆ ಮಕ್ಕಳನ್ನು ಪ್ರೇರಣೆ ನೀಡಲು ಕಾರ್ಯಪಡೆಯ ಕರ್ತವ್ಯ ನೆರವಾಯಿತು ಎನ್ನುತ್ತಾರೆ ಶಿಕ್ಷಕ ಬಿ.ನಾಗರಾಜು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version