ನಗರದಲ್ಲಿ ಗುರುವಾರ ಪೊಲೀಸ್ ಇಲಾಖೆ, ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ, ತಾಲ್ಲೂಕು ಪಂಚಾಯಿತಿ ವತಿಯಿಂದ ಕೊರೋನ ಜನ ಜಾಗೃತಿ ಅಭಿಯಾನ ನಡೆಸಿ ಅಮೀರ್ ಬಾಬಾ ದರ್ಗಾದಿಂದ ಟಿ.ಬಿ ರಸ್ತೆಯ ಮೂಲಕ ಬಸ್ ನಿಲ್ದಾಣದವರೆಗೂ ಜನಜಾಗೃತಿ ಜಾಥಾ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ವೈ.ಎಸ್.ಪಿ ಲಕ್ಷ್ಮಯ್ಯ ಕೊರೊನಾ ಎರಡನೇ ಅಲೆ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು ಜನತೆ ಮತ್ತಷ್ಟು ಜಾಗೃತಿವಹಿಸುವ ಜೊತೆಗೆ ವಿನಾಕಾರಣ ರಸ್ತೆಯಲ್ಲಿ ಓಡಾಡಬಾರದು. ಜನರು ಗುಂಪು ಗುಂಪಾಗಿ ಸೇರುವುದನ್ನು ಬಿಟ್ಟು ಆದಷ್ಟು ಮನೆಯಲ್ಲಿಯೇ ಉಳಿದುಕೊಳ್ಳುವ ಮೂಲಕ ಸಹಕಾರ ನೀಡಬೇಕು. ಸರ್ಕಾರದ ಮಾರ್ಗಸೂಚಿಯನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಧರಿಸಿ ಮತ್ತು ಅಂತರವನ್ನು ಕಾಯ್ದುಕೊಳ್ಳಿ. ಸ್ವಚ್ಚತೆಗೆ ಅದ್ಯತೆ ನೀಡಿ. ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆಯಿರಿ ಎಂದು ತಿಳಿಸಿದರು.
ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯದಾದ್ಯಂತ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಹಾಗೂ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಈ ಹೊಸ ಮಾರ್ಗಸೂಚಿಗಳನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಹೇಳಿದರು.
ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್, ಎಸ್.ಐ ಗಳಾದ ಲಿಯಾಖತ್, ಸುರೇಶ್, ತಹಶೀಲ್ದಾರ್ ರಾಜೀವ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ, ಇಒ ಚಂದ್ರಕಾಂತ್, ಪೌರಾಯುಕ್ತ ಶ್ರೀನಿವಾಸ್ ಹಾಜರಿದ್ದರು.