ತಾಲ್ಲೂಕಿನ ಹಂಡಿಗನಾಳ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಲಸಿಕಾ ಆಂದೋಲನಕ್ಕೆ ಚಾಲನೆ ನೀಡಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಕೊರೊನಾ ವಿರುದ್ಧದ ಸಮರಕ್ಕೆ ಲಸಿಕೆಯೊಂದೇ ನಮ್ಮ ಬಳಿಯಿರುವ ಅಸ್ತ್ರ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಲಸಿಕೆ ಬಗ್ಗೆ ಅನುಮಾನಗಳಿದ್ದರೆ ಅವರಿಗೆ ತಿಳಿಹೇಳಬೇಕು. ಲಸಿಕೆಯ ಅವಶ್ಯಕತೆ ಮತ್ತು ಅನುಕೂಲತೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.
ಅಮೆರಿಕಾ ಮುಂತಾದ ದೇಶಗಳಲ್ಲಿ ಪ್ರತಿಯೊಬ್ಬರೂ ಲಸಿಕೆಯನ್ನು ಹಾಕಿಸಿಕೊಂಡಿರುವುದರಿಂದ ಅಲ್ಲೆಲ್ಲಾ ಲಾಕ್ ಡೌನ್ ಹಿಂಪಡೆಯಲಾಗಿದೆ. ನಮ್ಮಲ್ಲಿಯೂ ಪ್ರತಿಯೊಬ್ಬರೂ ಲಸಿಕೆಯನ್ನು ಹಾಕಿಸಿಕೊಂಡಲ್ಲಿ ವಿಜ್ಞಾನಿಗಳು ಹೇಳುತ್ತಿರುವ ಮೂರನೇ ಅಲೆಯನ್ನು ಸಮರ್ಪಕವಾಗಿ ಎದುರಿಸಬಹುದಾಗಿದೆ. ಕೊರೊನಾ ಒಂದು ಮತ್ತು ಎರಡನೇ ಅಲೆಯಲ್ಲಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ನಾವು ಪಾಠ ಕಲಿಯಬೇಕಿದೆ. ಅಪಪ್ರಚಾರಕ್ಕೆ ಕಿವಿಗೊಡದೆ ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ಕರೆ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಲಸಿಕಾ ಆಂದೋಲನದ ಈ ದಿನ ಲಸಿಕೆ ಹಾಕಿಸುವಲ್ಲಿ ಜಿಲ್ಲೆಯಲ್ಲಿಯೇ ಶಿಡ್ಲಘಟ್ಟ ತಾಲ್ಲೂಕು ದಾಖಲೆ ಬರೆಯಲಿದೆ. ನಮ್ಮ ಗುರಿ ಈ ದಿನ 8200 ಮಂದಿಗೆ ಲಸಿಕೆ ಹಾಕಿಸುವುದಾಗಿದೆ. ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ, ಗ್ರಾಮ ಪಂಚಾಯಿತಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಎಲ್ಲರೂ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳಲ್ಲಿ, ಸ್ತ್ರೀಶಕ್ತಿ ಭವನ, ನಗರ ಆರೋಗ್ಯ ಕೇಂದ್ರ, ನಗರಸಭೆ, ಇದ್ಲೂಡು, 12 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ದಿನ ಲಸಿಕೆಯನ್ನು ಹಾಕುತ್ತಿರುವುದಾಗಿ ಅವರು ಹೇಳಿದರು.
ತಹಶೀಲ್ದಾರ್ ರಾಜೀವ್, ಇಒ ಚಂದ್ರಕಾಂತ್, ನಗರಸಭೆ ಆಯುಕ್ತ ಶ್ರೀನಿವಾಸ್, ಆರೋಗ್ಯ ಇಲಾಖೆಯ ದೇವರಾಜ್, ಲೋಕೇಶ್ ಹಾಜರಿದ್ದರು.