Bhaktarahalli, Sidlaghatta : ಅನ್ನದಾನವು ಇತರೆಲ್ಲಾ ದಾನಗಳಿಗಿಂತ ಶ್ರೇಷ್ಟವಾದುದಾಗಿದ್ದು ಶುಚಿಯಾದ ಸ್ವಚ್ಚ ಸ್ವಾದಿಷ್ಟವಾದ ಆಹಾರವನ್ನು ತಯಾರಿಸಿ ಶಾಲಾಮಕ್ಕಳಿಗೆ ನೀಡುವ ಅಕ್ಷರದಾಸೋಹ ಬಿಸಿಯೂಟ ತಯಾರಿಕಾ ಸಿಬ್ಬಂದಿಯವರ ಸೇವೆಯು ಅನನ್ಯವಾದುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಮುನಿರಾಜ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿ ಬಿಎಂವಿ ಶಾಲಾ ಆವರಣದಲ್ಲಿ ಗುರುವಾರ ತಾಲ್ಲೂಕುಪಂಚಾಯಿತಿ, ಅಕ್ಷರದಾಸೋಹ ಇಲಾಖೆಗಳ ಆಶ್ರಯದಲ್ಲಿ ಬಿಸಿಯೂಟ ತಯಾರಿಕಾ ಸಿಬ್ಬಂದಿಗಾಗಿ ಹಮ್ಮಿಕೊಂಡಿದ್ದ ಭಕ್ತರಹಳ್ಳಿ ಕ್ಲಸ್ಟರ್ ಮಟ್ಟದ ಆಹಾರ ತಯಾರಿಕೆ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸದೃಢ ದೇಹಾರೋಗ್ಯ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುವಲ್ಲಿ ಶಾಲೆಗಳಲ್ಲಿ ನೀಡುವ ಕ್ಷೀರಭಾಗ್ಯ, ಪೌಷ್ಟಿಕಾಂಶಯುತ ಬಿಸಿಯೂಟ ಯೋಜನೆಗಳು ಸಹಕಾರಿಯಾಗಿದೆ. ಅವುಗಳ ಯಶಸ್ವಿ ಅನುಷ್ಟಾನವು ಬಿಸಿಯೂಟ ತಯಾರಿಕೆ ಸಿಬ್ಬಂದಿಗಳ ಜವಾಬ್ದಾರಿಯನ್ನು ಅವಲಂಬಿಸಿದೆ ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ಮಾತನಾಡಿ, ಮಕ್ಕಳನ್ನು ದೇಶದ ಸತ್ಪ್ರಜೆಗಳನ್ನಾಗಿಸುವಲ್ಲಿ ಅಕ್ಷರದಾಸೋಹ ಸಿಬ್ಬಂದಿಯ ಪಾತ್ರವೂ ಹೆಚ್ಚಿದೆ. ವಿದ್ಯಾರ್ಥಿಗಳಲ್ಲಿನ ಹಸಿವನ್ನು ಹೋಗಲಾಡಿಸಿ ಆರೋಗ್ಯವನ್ನು ಹೆಚ್ಚಿಸುವಲ್ಲಿ ಶುಚಿತ್ವ ಮತ್ತು ಸ್ವಚ್ಚತೆಗೆ ಆದ್ಯತೆ ನೀಡಬೇಕು. ಅಕ್ಷರದಾಸೋಹ ಸಿಬ್ಬಂದಿಯು ಮಕ್ಕಳಿಗೆ ಹಸಿವನ್ನು ನೀಗಿಸುವುದರಿಂದ ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಬಲ್ಲರು ಎಂದರು.
ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ಆಂಜನೆಯ ಮಾತನಾಡಿ, ಈಗಾಗಲೇ ಎಲ್ಲಾ ತಾಲ್ಲೂಕುಗಳ ಅಕ್ಷರದಾಸೋಹ ಸಿಬ್ಬಂದಿಗೆ ಗುಣಮಟ್ಟದ ಆಹಾರ ತಯಾರಿಸುವ ಬಗ್ಗೆ ಸಾಕಷ್ಟು ತರಬೇತಿ ನೀಡಲಾಗಿದೆ. ಬಿಸಿಯೂಟ ತಯಾರಿಸುವಲ್ಲಿ ಸಾಕಷ್ಟು ಮುಂಜಾಗ್ರತಾಕ್ರಮಗಳನ್ನು ಅನುಸರಿಸಬೇಕು. ಸರ್ಕಾರದ ಮಹತ್ವಪೂರ್ಣ ಯೋಜನೆಗಳಲ್ಲಿ ಅಕ್ಷರದಾಸೋಹವು ಶ್ರೇಷ್ಟವಾದುದಾಗಿದೆ ಎಂದರು.
ಭಕ್ತರಹಳ್ಳಿ ಕ್ಲಸ್ಟರ್‌ಗಳ 14 ಶಾಲೆಗಳ 26 ಕ್ಕೂ ಹೆಚ್ಚು ಬಿಸಿಯೂಟ ತಯಾರಿಕಾ ಸಿಬ್ಬಂದಿ ತಯಾರಿಸಿದ್ದ 125 ಕ್ಕೂ ಹೆಚ್ಚು ಬಗೆಯ ತಿಂಡಿಗಳನ್ನು ಸವಿದು ಉತ್ತಮ ಆಹಾರಪದಾರ್ಥಗಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಎರಡೂ ಕ್ಲಸ್ಟರ್‌ಗಳ ಶಾಲೆಗಳ ಮುಖ್ಯಶಿಕ್ಷಕರು, ಬಿಸಿಯೂಟ ತಯಾರಿಸುವ ನೌಕರರು ಹಾಜರಿದ್ದರು.