ರಾಜ್ಯಾದ್ಯಂತ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಗರದ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಎನ್ ಎಸ್ ಯು ಐ ಪದಾಧಿಕಾರಿಗಳೊಂದಿಗೆ ಬುಧವಾರ ಹಣ್ಣು, ತರಕಾರಿ ಮಾರುವ ಮೂಲಕ ಕೆಲ ಕಾಲ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ NSUI ಮಾಜಿ ರಾಜ್ಯ ಸಂಚಾಲಕ ಕೆ.ಎನ್.ಮುನೀಂದ್ರ ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆ ಸೇರಿದಂತೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು ಶ್ರಮಿಸುವ ಅತಿಥಿ ಉಪನ್ಯಾಸಕರು ತಮ್ಮ ಜೀವನ ರೂಪಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯಾದ್ಯಂತ 14,500 ಮಂದಿ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದು, ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು ಶ್ರಮಿಸುವ ಉಪನ್ಯಾಸಕರು ತಮ್ಮ ಜೀವನ ರೂಪಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿರುವುದು ಖಂಡನೀಯ.
ತಮ್ಮ ವಿವಿಧ ಬೇಡಿಕೆಗಳಿಗಾಗಿ ಹಲವಾರು ವರ್ಷಗಳಿಂದ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ಸರ್ಕಾರ ಈವರೆಗೂ ಯಾವುದೇ ಬೇಡಿಕೆಗಳನ್ನು ಪೂರೈಸಿಲ್ಲ.
ಹಾಗಾಗಿ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ, ವೇತನ ಹೆಚ್ಚಳ ಸೇರಿದಂತೆ ಉಪನ್ಯಾಸಕರ ವಿದ್ಯಾರ್ಹತೆಗನುಸಾರ ಹುದ್ದೆಗಳನ್ನು ಖಾಯಂ ಗೊಳಿಸಬೇಕು. ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಅತಿಥಿ ಉಪನ್ಯಾಸಕರಿಂದ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ಮುಂದುವರೆಸಲಾಗುವುದು ಎಂದರು.
ನಗರದ ಪ್ರಥಮ ದರ್ಜೆ ಕಾಲೇಜಿನಿಂದ ತಾಲ್ಲೂಕು ಕಚೇರಿಯವರೆಗೂ ಅತಿಥಿ ಉಪನ್ಯಾಸಕರು ಮೆರವಣಿಗೆ ಮೂಲಕ ಸಾಗಿದರು. ಕೆಲ ಕಾಲ ತಾಲ್ಲೂಕು ಕಚೇರಿ ಮುಂಭಾಗ ಹಣ್ಣು, ತರಕಾರಿಗಳನ್ನು ಮಾರುವ ಮೂಲಕ ಪ್ರತಿಭಟನೆ ನಡೆಸಿ, ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಿರಸ್ತೇದಾರ್ ಕೆ.ಎನ್.ಮಂಜುನಾಥ್ ರ ಮೂಲಕ ತಹಶೀಲ್ದಾರ್ ರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಕೆ.ಎಲ್.ಶಿವಕುಮಾರ್, ಕಮಲ.ಟಿ.ಸಿ. ಶೋಭ.ಎಸ್, ಆಸ್ಮಾ.ಕೆ.ಎಸ್, ಮೋಹನ್ ಕುಮಾರ್.ಆರ್, ಚಂದ್ರಿಕ, ಭವ್ಯ, ಶ್ವೇತ, ವೆಂಕಟೇಶ್, ಚಂದ್ರಶೇಖರ, ನಾಗೇಂದ್ರಬಾಬು, ಅಮರೇಶ್.ಕೆ, ಗೀತಾ.ಎ, ನೀಲೂಫರ್.ಜೆ ಹಾಜರಿದ್ದರು.