News

ಹಾಲಿನ ಖರೀದಿ ದರ ಹೆಚ್ಚಳಕ್ಕೆ ಆಗ್ರಹಿಸಿ ಚಿಮುಲ್‌ಗೆ ರೈತ ಸಂಘ ಮನವಿ

Sidlaghatta Karnataka Raitha Sangha Milk Price Protest CHIMUL

Sidlaghatta : ಹಾಲಿನ ಖರೀದಿ ದರವನ್ನು ತಕ್ಷಣ ಹೆಚ್ಚಿಸಬೇಕು ಹಾಗೂ ಪಶು ಆಹಾರದ ಬೆಲೆಯನ್ನು ನಿಯಂತ್ರಿಸಿ ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಶುಕ್ರವಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ (ಚಿಮುಲ್) ಶಿಡ್ಲಘಟ್ಟ ಉಪ ಕಚೇರಿ ಶಿಬಿರ ಘಟಕದ ವ್ಯವಸ್ಥಾಪಕ ಡಾ. ರವಿಕಿರಣ್ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಹಾಲಿನ ಖರೀದಿ ದರ ಕಡಿಮೆಯಾಗಿರುವುದರಿಂದ ಹಾಲು ಉತ್ಪಾದಕ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಮುಂಗಾರು ಮಳೆಯ ಕೊರತೆಯಿಂದ ಶಿಡ್ಲಘಟ್ಟ ತಾಲ್ಲೂಕು ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಮೇವು ಅಭಾವ ಉಂಟಾಗಿದೆ. ಪಶು ಆಹಾರ, ಫೀಡ್, ಚಕ್ಕೆ, ಬೂಸಾ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಹಾಲು ಉತ್ಪಾದನಾ ವೆಚ್ಚ ದುಪ್ಪಟ್ಟಾಗಿದೆ. ಇಂತಹ ಸಂದರ್ಭದಲ್ಲಿ ಹಾಲಿನ ಖರೀದಿ ದರವನ್ನು ಹೆಚ್ಚಿಸುವ ಬದಲು ಕಡಿತಗೊಳಿಸಿರುವುದು ರೈತರಿಗೆ ಮತ್ತಷ್ಟು ಹೊರೆ ತಂದಿದೆ ಎಂದು ಅವರು ತಿಳಿಸಿದರು.

ರೈತ ಸಂಘದ ಆಗ್ರಹ ಏನು?

ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಪ್ರತಿ ಲೀಟರ್‌ ಗೆ ಕನಿಷ್ಠ ₹10 ಹೆಚ್ಚುವರಿ ಖರೀದಿ ದರ ನಿಗದಿಪಡಿಸಬೇಕು. ಜೊತೆಗೆ ಪಶು ಆಹಾರದ ಬೆಲೆಯನ್ನು ನಿಯಂತ್ರಿಸಿ ಕಡಿಮೆ ಮಾಡುವ ಮೂಲಕ ಹಾಲು ಉತ್ಪಾದಕರನ್ನು ರಕ್ಷಿಸಿ, ಪಶು ಸಂಗೋಪನೆಗೆ ಉತ್ತೇಜನ ನೀಡಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಚಿಮುಲ್ ಶಿಡ್ಲಘಟ್ಟ ಉಪ ಕಚೇರಿ ಶಿಬಿರ ಘಟಕದ ವ್ಯವಸ್ಥಾಪಕ ಡಾ. ರವಿಕಿರಣ್, ರೈತ ಸಂಘ ಸಲ್ಲಿಸಿರುವ ಮನವಿಯನ್ನು ಆಡಳಿತ ಮಂಡಳಿಯ ಗಮನಕ್ಕೆ ತರಲಾಗುವುದು. ಮಳೆಯ ಕೊರತೆಯಿಂದ ಹಾಲು ಉತ್ಪಾದಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ಮನವಿಯನ್ನು ರವಾನಿಸಲಾಗುವುದು ಎಂದು ಭರವಸೆ ನೀಡಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಟಿ. ಬಸ್ಸನಹಳ್ಳಿ ದೇವರಾಜ್, ವೇಣುಗೋಪಾಲ್, ಗುಡಿಹಳ್ಳಿ ಕೆಂಪಣ್ಣ, ಕೆಂಪರೆಡ್ಡಿ, ದೇವರಾಜ್ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ಹಾಲು ಉತ್ಪಾದಕರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Share
error: Content is protected !!