ಕಳೆದ ವರ್ಷ ದೇಶದೆಲ್ಲೆಡೆ ಕೊರೊನಾ ವ್ಯಾಪಕತೆ ತೀವ್ರವಾಗಿದ್ದ ಸಂದರ್ಭದಲ್ಲಿ ಶಿಡ್ಲಘಟ್ಟದ ನಗರಸಭೆಯ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸಿದ್ದ ತ್ಯಾಗರಾಜ್(50) ಅವರು ಶುಕ್ರವಾರ ಮುಂಜಾನೆ ವಿವಿಧ ಅಂಗಗಳ ವೈಫಲ್ಯದಿಂದ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ತುಮಕೂರು ಜಿಲ್ಲೆಯ ಕೊಟ್ಟಿಗೆರೆ ತಾಲ್ಲೂಕಿನ ಅವರ ಸ್ವಗ್ರಾಮದಲ್ಲಿ ನೆರವೇರಿಸಲಾಯಿತು. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಕಳೆದ ವರ್ಷ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಅಕ್ಷರಶಃ ಪೊಲೀಸರಂತೆ ಲಾಠಿ ಹಿಡಿದು ಸಾರ್ವಜನಿಕರಿಗೆ, ಅಂಗಡಿಗಳವರಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಮಾಸ್ಕ್ ಧರಿಸಲು ಅರಿವು ಮೂಡಿಸಿದ್ದರು. ಸಾರ್ವಜನಿಕರಿಂದ ಅಂಗಡಿಗಳು ಸುಲಿಗೆ ಮಾಡದಂತೆ ಸಾಮಗ್ರಿಗಳ ಬೆಲೆಯನ್ನು ನಿಗದಿಪಡಿಸಿ ಅದನ್ನು ಅಂಗಡಿ ಮಾಲೀಕರು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ವಹಿಸಿದ್ದರು. ಅನೇಕ ಬಡವರಿಗೆ ತಮ್ಮ ಸ್ವಂತ ಹಣದಲ್ಲಿ ದಿನಸಿಯನ್ನು ವಿತರಿಸಿದ್ದರು. ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಶ್ರಮಿಸಿದ್ದರು.
ಜಿಲ್ಲೆಯಲ್ಲಿಯೇ ಶಿಡ್ಲಘಟ್ಟ ತಾಲ್ಲೂಕಿಗೆ ಕೊರೊನ ಪ್ರವೇಶಿಸಿದ್ದು ಕಟ್ಟಕಡೆಯದಾಗಿ. ಇದಕ್ಕೆ ಕಾರಣರಾದವರು ನಗರಸಭೆ ಮತ್ತು ಆರೋಗ್ಯ ಇಲಾಖೆಯವರು. ಇತರ ಊರುಗಳಿಂದ ಜನರು ಬರದಂತೆ ಹಾಗೂ ನಮ್ಮಲ್ಲಿಂದ ಬೇರೆಡೆಗೆ ಹೋಗದಂತೆ ನೋಡಿಕೊಳ್ಳುವುದರ ಜೊತೆಗೆ ನಗರದಲ್ಲಿ ನೈರ್ಮಲ್ಯ ಕಾಪಾಡುವಲ್ಲಿ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸಿದ್ದ ತ್ಯಾಗರಾಜ್ ಪರಿಶ್ರಮ ಬಹಳಷ್ಟಿತ್ತು. ಪೌರಕಾರ್ಮಿಕರಿಗೆ ಹಲವಾರು ತಿಂಗಳುಗಳ ವೇತನ ನೀಡದಿರುವುದರ ಬಗ್ಗೆ ದೂರು ಬಂದಾಗ ಎಲ್ಲರ ವೇತನ ಸಕಾಲದಲ್ಲಿ ಸಿಗುವಂತೆ ಮಾಡುವಲ್ಲಿ ತ್ಯಾಗರಾಜ್ ಅವರು ಕ್ರಮ ಕೈಗೊಂಡಿದ್ದರು.
ತ್ಯಾಗರಾಜ್ ಅವರ ನಿಧನಕ್ಕೆ ಪೌರಕಾರ್ಮಿಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಂತ್ಯಸಂಸ್ಕಾರದಲ್ಲಿ ರಾಜ್ಯ ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಪಿ.ಮುರಳಿ, ಪೌರಾಯುಕ್ತ ಶ್ರೀನಿವಾಸ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಭಾಗಿಯಾಗಿದ್ದರು.