Home News ಶಿಡ್ಲಘಟ್ಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ

ಶಿಡ್ಲಘಟ್ಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ

0
Sidlaghatta Chief Minister Basavaraj Bommai Visit

ಮನೆ ಪೂರ್ಣ ಪ್ರಮಾಣದಲ್ಲಿ ಬಿದ್ದವರಿಗೆ ಕೂಡಲೇ 95 ಸಾವಿರ ರೂ ನೀಡಬೇಕು. ಒಟ್ಟು 5 ಲಕ್ಷ ನೀಡಬೇಕು, ಭಾಗಶಃ ಬಿದ್ದವರಿಗೆ 3 ಲಕ್ಷ ರೂ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

 ಈಚೆಗೆ ಬಿದ್ದ ಮಳೆಗೆ ಕೆರೆಯ ಕಟ್ಟೆ ಒಡೆದು ಅಪಾರ ನಷ್ಟವಾಗಿದ್ದ ತಾಲ್ಲೂಕಿನ ನಲ್ಲೋಜನಹಳ್ಳಿ ಅಗ್ರಹಾರ ಕೆರೆಗೆ ಭಾನುವಾರ ಭೇಟಿ ನೀಡಿ ಅವರು ಮಾತನಾಡಿದರು.

 ಅಗ್ರಹಾರದ ಕೆರೆ ಒಡೆದು ನೀರು ಹರಿದು ಅಪಾರ ಬೆಳೆ ನಾಶವಾಗಿದೆ ಮತ್ತು ಇಲ್ಲಿ ನಿಲ್ಲಬೇಕಾದ ನೀರು ಆಂಧ್ರದ ಕಡೆಗೆ ಹರಿದು ಹೋಗಿರುವುದು ದುರದೃಷ್ಟಕರ. ಈ ಕೆರೆ ನಮಗೆ ಬಹಳ ಮುಖ್ಯ. ಅದಕ್ಕಾಗಿಯೇ ಇದರ ವೀಕ್ಷಣೆಗೆ ಬಂದಿದ್ದೇನೆ. ಇಲ್ಲಿ ಪರಿಸ್ಥಿತಿಯನ್ನು ನೋಡಿ, ಗ್ರಾಮಸ್ಥರೊಂದಿಗೆ ಮಾತನಾಡಿ, ಸಚಿವರುಗಳು, ಸಂಸದರು, ಎಂಜಿನಿಯರುಗಳೊಂದಿಗೆ ಚರ್ಚಿಸಿ ಇದಕ್ಕೆ ಶಾಶ್ವತವಾಗಿ ಉಳಿಯುವಂತಹ ಬಂಡ್ ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಮೊದಲು ನೀರು ಉಳಿಸಿಕೊಳ್ಳುವ ಕ್ರಮ ಕೈಗೊಳ್ಳಲು ಸೂಚಿಸಿರುವೆನು ಎಂದರು.

 ಸಂಪರ್ಕ ಕಡಿತವಾಗಿರುವೆಡೆ ರಸ್ತೆ, ಸೇತುವೆ ಮುಂತಾದವುಗಳ ನಿರ್ಮಾಣ ಮಾಡಿ ಸಂಪರ್ಕ ಕಲ್ಪಿಸುವುದು ನಮ್ಮ ಪ್ರಥಮ ಪ್ರಾಶಸ್ತ್ಯವಾಗಿದೆ. ವಿದ್ಯುತ್ ಕಂಬಗಳು ಬಿದ್ದು, ಸಂಪರ್ಕ ಕಡಿತವಾಗಿದ್ದರೆ ಅದನ್ನು ಸರಿಪಡಿಸುವುದು ಎರಡನೇ ಪ್ರಾಶಸ್ತ್ಯದ ಕೆಲಸ. ಇಲ್ಲಿ ಎರಡು ರೀತಿಯ ಸಮೀಕ್ಷೆಗಳಿವೆ. ಒಂದು ಕಣ್ಣೋಟದಿಂದ ಮಾಡುವಂತಹದ್ದು, ಮತ್ತೊಂದು ಕೃಷಿ, ಕಂದಾಯ, ತೋಟಗಾರಿಕೆ, ರೇಷ್ಮೆ ಮುಂತಾದ ಇಲಾಖೆಗಳ ಜಂಟಿ ಸಮೀಕ್ಷೆಯ ವರದಿಯನ್ನು ಆಧರಿಸುವಂತಹದ್ದು.

 ಇಡೀ ರಾಜ್ಯದ ಮಾಹಿತಿಯನ್ನು ಪಡೆಯುವವನಿದ್ದೇನೆ. ಬೆಳೆ, ವಸ್ತು, ಮನೆಗಳು, ರಸ್ತೆ ಮುಂತಾದ ಹಾನಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವೆನು. ಈಗ ಸಿಕ್ಕಿರುವ ಪ್ರಾಥಮಿಕ ಮಾಹಿತಿಯಂತೆ ಐದು ಲಕ್ಷ ಹೆಕ್ಟೇರ್ ಗೂ ಅಧಿಕ ಬೆಳೆ ನಾಶವಾಗಿದೆ. 40 ಸಾವಿರ ಮನೆಗಳು ಬಿದ್ದಿರುವ ಮಾಹಿತಿ ಲಭಿಸಿದೆ ಎಂದರು..

 ಈಗಾಗಲೇ ನಾವು ಎಲೆಕ್ಷನ್ ಕಮಿಷನ್ ಗೆ ಪತ್ರ ಬರೆದಿದ್ದೇವೆ. ನಮ್ಮ ಸಚಿವರು ಅಧಿಕಾರಿಗಳೊಂದಿಗೆ ಸಭೆ ಮಾಡಿ ಚರ್ಚಿಸಿ ಜನರಿಗೆ ಅನುಕೂಲ ಮಾಡಿಕೊಡಲು ಅನುಮತಿ ಕೋರಿದ್ದೇವೆ. ಅವರು ಚೀಫ್ ಎಲೆಕ್ಷನ್ ಕಮಿಷನ್ ಅವರಿಂದ ಅನುಮತಿ ಕೋರಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಅನುಮತಿ ನಾಳೆ ದೊರೆತ ಕೂಡಲೇ ನಮ್ಮೆಲ್ಲಾ ಸಚಿವರು ಆಯಾ ಜಿಲ್ಲೆಗಳಲ್ಲಿ ಸಮರ್ಪಕವಾಗಿ ಸಮೀಕ್ಷೆ ನಡೆಸುವರು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್, ಸಂಸದ ಮುನಿಸ್ವಾಮಿ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version