Cheemangala, Sidlaghatta : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲಾಜ್ಯೋತಿ ಜಾನಪದ ಕಲಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ತಾಲ್ಲೂಕಿನ ಚೀಮಂಗಲ ಗ್ರಾಮದ ಶ್ರೀ ಚಂದ್ರ ಮುಳೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಕಲಾ ಜ್ಯೋತಿ ಜಾನಪದ ಕಲಾ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಬಿ. ಎನ್. ರವಿಕುಮಾರ್ ಮಾತನಾಡಿ, ಇಂತಹ ಜಾನಪದ ಕಲೆಯ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ನಡೆಯಬೇಕು. ಇದರಿಂದ ಕಲೆಗಳಿಗೆ ಪ್ರೋತ್ಸಾಹ ಸಿಗುತ್ತದೆ. ಕಲಾ ಮೇಳವನ್ನು ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆಸುತ್ತಿರುವುದು ಶುಭಕರ. ಚಂದ್ರಮೌಳೇಶ್ವರ ಸ್ವಾಮಿ ಆಶೀರ್ವಾದ ಎಲ್ಲರಿಗೂ ಇರಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕ ಎಂ. ರಾಜಣ್ಣ, ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ಹಾಸನದಲ್ಲಿ ಉಪವಿಭಾಗಾಧಿಕಾರಿಯಾಗಿರುವ ಚೀಮಂಗಲದ ಮಂಜುನಾಥ್ ಮತ್ತು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿದರು.
ಕಲಾ ಮೇಳದಲ್ಲಿ ನವೀನ್ ಅವರ ವೀರಗಾಸೆ ತಂಡದಿಂದ ವೀರಗಾಸೆ ನೃತ್ಯ, ಪ್ರೇಮ್ ಕಲಾಕಾರ ಹಾಗೂ ಪುನೀತ್ ಭದ್ರಕಾಳಿ ರವರಿಂದ ಭದ್ರಕಾಳಿ ನೃತ್ಯ, ಕೆ.ಸಿ. ಶಿವಕುಮಾರ್ ಮತ್ತು ತಂಡದಿಂದ ಕರಡಿ ವಾದ್ಯ, ಮುಳ್ಳೂರು ಶಿವಣ್ಣರವರಿಂದ ಕುರುಕ್ಷೇತ್ರ ಪೌರಾಣಿಕ ನಾಟಕ, ದೀಕ್ಷಿತ ಅವರಿಂದ ಭರತನಾಟ್ಯ, ಡೊಳ್ಳು ಕುಣಿತ, ಚಿಲಿಪಿಲಿ ಗೊಂಬೆ ಕುಣಿತ ಮುಂತಾದ ಜಾನಪದ ಕಲಾತಂಡಗಳು ಕಾರ್ಯಕ್ರಮಕ್ಕೆ ಮೆರಗು ತಂದವು.
ಚೀಮಂಗಲ ಗ್ರಾಮ ಪಂಚಾಯಿತಿ ಸದಸ್ಯರು, ರೈತ ಸಂಘದ ಸದಸ್ಯರು, ದೇವಾಲಯದ ಪ್ರಧಾನ ಅರ್ಚಕ ಸಿದ್ದ ಬಸವರಾಜ್, ಕಲಾ ಜ್ಯೋತಿ ಜಾನಪದ ಕಲಾ ಸಂಸ್ಥೆಯ ಅಧ್ಯಕ್ಷ ವೀರಭದ್ರಯ್ಯ, ಪ್ರಧಾನ ಕಾರ್ಯದರ್ಶಿ ವೀರಗಾಸೆ ಕಲಾವಿದ ಕೊತ್ತನೂರು ಗಂಗಾಧರ್ ಹಾಜರಿದ್ದರು.