Sidlaghatta : ಕೇಂದ್ರೀಯ ರೇಷ್ಮೆ ಮಂಡಳಿಯ 32 ಮಂದಿ ವೈಜ್ಞಾನಿಕ, ತಾಂತ್ರಿಕ ಮತ್ತು ಆಡಳಿತಾತ್ಮಕ ಸಿಬ್ಬಂದಿ ಶುಕ್ರವಾರ ತಾಲ್ಲೂಕಿಗೆ ಭೇಟಿ ನೀಡಿ, ರೇಷ್ಮೆ ಗೂಡಿನ ಮಾರುಕಟ್ಟೆ, ಕಾಟೇಜ್ ಬೇಸಿನ್ ರೀಲಿಂಗ್ ಘಟಕ, ಮಲ್ಟಿ ಎಂಡ್ ರೀಲಿಂಗ್ ಘಟಕ, ಟ್ವಿಸ್ಟಿಂಗ್ ಮತ್ತು ಸ್ವಯಂಚಾಲಿತ ರೀಲಿಂಗ್ ಘಟಕಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬೆಂಗಳೂರಿನ ಸಿ.ಎಸ್.ಬಿ ಕಚೇರಿಯಲ್ಲಿ ತರಬೇತಿ ಪಡೆಯುತ್ತಿರುವ 32 ಮಂದಿ ವೈಜ್ಞಾನಿಕ, ತಾಂತ್ರಿಕ ಮತ್ತು ಆಡಳಿತಾತ್ಮಕ ಸಿಬ್ಬಂದಿ, ಹೆಚ್ಚಿನ ತರಬೇತಿ ಹಾಗೂ ವಸ್ತುಸ್ಥಿತಿಯ ಅವಲೋಕನಕ್ಕಾಗಿ, ವಿಜ್ಞಾನಿಗಳಾದ ಕೆ.ಎನ್.ಮಹೇಶ್, ಕಿರಣ್ ಮಳಲಿ ಮತ್ತು ಸಹಾಯಕ ನಿರ್ದೇಶಕ ಸಂದೀಪ್ ಅವರೊಂದಿಗೆ ಆಗಮಿಸಿ, ಸ್ಥಳೀಯ ಅಧಿಕಾರಿಗಳಿಂದ ಮತ್ತು ರೀಲರುಗಳು ಹಾಗೂ ರೈತರಿಂದ ಮಾಹಿತಿ ಪಡೆದರು.
ರೇಷ್ಮೆ ಉಪ ನಿರ್ದೇಶಕ ಮಹದೇವಯ್ಯ ಮತ್ತು ರೇಷ್ಮೆ ಸಹಾಯಕ ನಿರ್ದೇಶಕ ತಿಮ್ಮರಾಜು ಅವರು, ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಈ ಹರಾಜು ಪ್ರಕ್ರಿಯೆ, ರೈತರಿಗೆ ರೀಲರುಗಳಿಂದ ಹಣ ಸಿಗುವ ರೀತಿ ಮುಂತಾದ ತಾಂತ್ರಿಕತೆ ಹಾಗೂ ಶೀಘ್ರ ಹಣ ವರ್ಗಾವಣೆಯ ಬಗ್ಗೆ ವಿವರ ನೀಡಿದರು.
ಕಚ್ಚಾ ರೇಷ್ಮೆಯ ಉತ್ಪಾದನಾ ಘಟಕಗಳಿಗೂ ಭೇಟಿ ನೀಡಿ ಅದರ ಕಾರ್ಯವೈಖರಿಗಳು ಮತ್ತು ಟ್ವಿಸ್ಟಿಂಗ್ ಘಟಕಗಳಲ್ಲಿನ ಕೆಲಸ ಕಾರ್ಯವನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.