Tippenahalli, Sidlaghatta : ಗ್ರಾಮೀಣ ಪ್ರದೇಶದ ಪ್ರಮುಖ ಆದಾಯದ ಮೂಲ ಪಶುಸಂಗೋಪನೆ. ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಲು ಹಸುಗಳಿಗೆ ಪ್ರೋಟಿನ್ ಯುಕ್ತ ಆಹಾರವನ್ನ ನೀಡಬೇಕು. ಇದರಿಂದ ಹಾಲಿನಲ್ಲಿ ಫ್ಯಾಟ್ ಪ್ರಮಾಣ ಹೆಚ್ಚುವುದರಿಂದ ರೈತರಿಗೆ ಹೆಚ್ಚಿನ ಆದಾಯ ಸಿಗಲಿದೆ ಎಂದು ಕೆ.ಎಂ.ಎಫ್ ಮತ್ತು ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಗ್ರಾಮೀಣ ಕೃಷಿ ಕಾರ್ಯನುಭವ ಚಟುವಟಿಕೆ ಅಡಿಯಲ್ಲಿ ಕೃಷಿ ಮಹಾವಿದ್ಯಾಲಯದ ಬಿ.ಎಸ್ಸಿ(ಕೃಷಿ), ಬಿಎಸ್ಸಿ(ಕೃಷಿ ವ್ಯಾಪಾರ ನಿರ್ವಹಣೆ) ಮತ್ತು ಬಿ.ಟೆಕ್(ಕೃಷಿ) ವಿದ್ಯಾರ್ಥಿಗಳು ಹಾಗೂ ಪಶುಸಂಗೋಪನಾ ಇಲಾಖೆಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಬರಡು ರಾಸುಗಳ ತಪಾಸಣಾ ಹಾಗೂ ಪಶು ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ಹಾಲಿನ ಉತ್ಪಾದನೆ ಹೆಚ್ಚಿಸುವುದರಿಂದ ರೈತರು ಹೆಚ್ಚಿನ ಆದಾಯ ಗಳಿಸಬಹುದು, ಕ್ಯಾಲ್ಸಿಯಂ ಮತ್ತು ಮಿನರಲ್ಸ್ ಇರುವ ನ್ಯೂಟ್ರಿಷನ್ ಆಹಾರವನ್ನ ಹಸುಗಳಿಗೆ ಕೊಡಬೇಕು. ಸೀಮೆ ಹುಲ್ಲಿನ ಜೊತೆ ದ್ವಿದಳ ಧಾನ್ಯಗಳ ಹುಲ್ಲನ್ನು ಕೊಡಬೇಕು. ಇದರ ಜೊತೆ ಅಜೋಲವನ್ನ ಕೊಡಬೇಕು. ಹಸುಗಳು ಕೊಡುವ ಹಾಲಿನ ಪ್ರಮಾಣಕ್ಕೆ ತಕ್ಕಂತೆ ಪ್ರೋಟಿನ್ ಯುಕ್ತ ಆಹಾರವನ್ನ ಕೊಡುವುದರಿಂದ ಹಸುವಿನ ಹಾಲಿನಲ್ಲಿ ಫ್ಯಾಟ್ (ಡಿಗ್ರಿ) ಹೆಚ್ಚಾಗುವುದಾಗಿ ಹೇಳಿದರು.
ಪ್ರಾಣಿ ಪ್ರಸೂತಿ ತಜ್ಞ ಡಾ.ರವೀಂದ್ರ, ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಬಿ.ವೀರೇಗೌಡ, ಪಶು ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಆನಂದ್ ಮಣೇಗಾರ್, ಮಾತನಾಡಿ, ಕೆಚ್ಚಲುಬಾವು, ಕಾಲುಬಾಯಿಜ್ವರ, ಕಂದುರೋಗ ಸೇರಿದಂತೆ ವಿವಿಧ ಖಾಯಿಲೆಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ವಿವರಿಸಿದರು.
ಪಶುವೈದ್ಯಾಧಿಕಾರಿಗಳಾದ ಡಾ.ಪ್ರಶಾಂತ್, ಡಾ.ನವೀನ್ ಚಂದ್ರ, ಡಾ.ರಮೇಶ್ ಕುಮಾರ್, ಡಾ.ಧನಂಜಯ್, ಡಾ.ಬಿಂದುಜಾ ಅವರು, ಮಾತನಾಡಿ, ಮೂಕ ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಹಸು, ಮೇಕೆ, ಕುರಿ, ಕೋಳಿ ಇವುಗಳಿಗೆ ಸರಿಯಾದ ಸಮಯದಲ್ಲಿ ಲಸಿಕೆ ಹಾಕಿಸಿ ಮತ್ತು ಜೀವ ವಿಮೆ ಮಾಡಿಸಬೇಕು. ದನದ ಕೊಟ್ಟಿಗೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹಸುಗಳಿಗೆ ಒಳ್ಳೆಯ ಆಹಾರ, ಇಂಡಿ, ಬೂಸಾ, ಹಸಿ ಮೇವು ಮತ್ತು ಒಣ ಮೇವನ್ನು ಸಮಯಕ್ಕೆ ಸರಿಯಾಗಿ ಕೊಡಬೇಕು ಎಂದು ಮಾಹಿತಿ ನೀಡಿದರು.
ಹಸುಗಳನ್ನು ತಪಾಸಣೆ ಮಾಡಿ, ಉಚಿತ ಚಿಕಿತ್ಸೆ ಮತ್ತು ಔಷಧಿಗಳನ್ನು ವಿತರಿಸಲಾಯಿತು. ವಿವಿಧ ಮೇವಿನ ತಳಿಗಳ ಪ್ರದರ್ಶನ, ಅಜೋಲ ಪ್ರಾತ್ಯಕ್ಷಿಕೆ, ಮೇವು ಕತ್ತರಿಸುವ ಯಂತ್ರಗಳು ಹಾಗು ರಸಮೇವು, ರೋಗ ನಿರ್ವಹಣೆ, ಲಸಿಗೆಗಳ ಬಗ್ಗೆ ಮಾಹಿತಿಯನ್ನು ಪ್ರದರ್ಶಿಸಲಾಗಿತ್ತು. ಕರು ಪ್ರದರ್ಶನದಲ್ಲಿ ಮೂರು ವಿಭಾಗಗಳನ್ನು ಮಾಡಿ ಆರು ತಿಂಗಳೊಳಗಿನ ಕರುಗಳು, ಒಂದು ವರ್ಷದೊಳಗಿನ ಕರುಗಳು ಹಾಗೂ ನಾಟಿ ತಳಿಗಳಿಗೆ ಬಹುಮಾನ ನೀಡಲಾಯಿತು.
ಡಾ.ಬಿ.ವಿ.ವೆಂಕಟೇಶಯ್ಯ, ಡಾ.ಮಾಧವ್, ಡಾ.ಮಂಜುನಾಥಯ್ಯ, ಡಾ.ಶ್ರೀನಾಥ್ ರೆಡ್ಡಿ, ಡಾ.ರವಿಕಿರಣ್, ಡಾ.ಆನಂದ್, ತಿಪ್ಪೇನಹಳ್ಳಿ ಎಂ.ಪಿ.ಸಿ.ಎಸ್ ಅಧ್ಯಕ್ಷ ಟಿ.ಪಿ.ಪಾರ್ಥಸಾರಥಿ, ಕೆ.ಎಂ.ಸದಾಶಿವ, ಜಯಚಂದ್ರ, ತಿಪ್ಪೇನಹಳ್ಳಿ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು.