ತಾಲ್ಲೂಕಿನ ಬೋದಗೂರು ಕೆರೆಯಲ್ಲಿ ಭಾನುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೋದಗೂರು ಕೆರೆ ಬಳಕೆದಾರರ ಸಂಘ ಹಾಗೂ ಆನೂರು ಗ್ರಾಮ ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ “ನಮ್ಮೂರು ನಮ್ಮ ಕೆರೆ” ಯೋಜನೆಯಡಿಯಲ್ಲಿ ನಡೆಯುತ್ತಿರುವ ಕೆರೆಯ ಪುನಶ್ಚೇತನ ಕಾರ್ಯಕ್ರಮದ ವರದಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಬಿ.ವಸಂತ್ ವಿವರಿಸಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡ ಬೋದಗೂರು ಕೆರೆಯ ಅಭಿವೃದ್ಧಿ ಕಾಮಗಾರಿ ಪಾರದರ್ಶಕವಾಗಿ ನಡೆಯುತ್ತಿದೆ. ಇದರಿಂದ ಈ ಭಾಗದ ಜನರ ಆರ್ಥಿಕ ಅಭಿವೃದ್ಧಿ ಆಗುತ್ತದೆ ಎಂದು ಅವರು ತಿಳಿಸಿದರು.
ಕೆರೆಯಲ್ಲಿ ಹೂಳೆತ್ತುವುದರಿಂದ ತಟ್ಟೆಯಂತಿರುವ ಕೆರೆ ಪಾತ್ರೆಯಂತಾಲಿದೆ. ನೀರು ನಿಂತಾಗ, ಜನರಿಗಷ್ಟೇ ಅಲ್ಲದೆ ಜಾನುವಾರುಗಳಿಗೆ, ಪಕ್ಷಿಗಳಿಗೆ ಅನುಕೂಲವಾಗಲಿದೆ. ಕಳೆದ ಹದಿನೈದು ದಿನಗಳಲ್ಲಿ ಬೋದಗೂರು ಕೆರೆಯಲ್ಲಿ 15 ಸಾವಿರ ಲೋಡು ಕೆರೆಯ ಫಲವತ್ತಾದ ಮಣ್ಣನ್ನು, ಸುಮಾರು 600 ಮಂದಿ ರೈತರು ತಮ್ಮ ತೋಟಗಳಿಗೆ ಕೊಂಡೊಯ್ದಿದ್ದಾರೆ. 20 ಎಕರೆ ವಿಸ್ತೀರ್ಣದ ಕೆರೆಗೆ 18 ಲಕ್ಷ 25 ಸಾವಿರ ರೂಗಳಷ್ಟು ಹಣ ಈ ಯೋಜನೆಗೆ ಮಂಜೂರಾಗಿದ್ದು, 15 ದಿನಗಳಲ್ಲಿ 4 ಲಕ್ಷ ರೂಗಳು ಖರ್ಚು ಮಾಡಿ ಸುಮಾರು ಆರು ಎಕರೆಯಷ್ಟು ಪ್ರದೇಶದ ಹೂಳೆತ್ತಲಾಗಿದೆ. ಕಾಮಗಾರಿಯು ಪಾರದರ್ಶಕವಾಗಿ ಕೆರೆ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯುತ್ತಿದೆ ಎಂದು ವಿವರಿಸಿದರು.
ಬೋದುಗೂರು ಕೆರೆಯಲ್ಲಿ 400 ಗಂಟೆಗಳ ಕಾಮಗಾರಿ ನಡೆದಿದ್ದು, 20 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಮೂರುವರೆ ಅಡಿ ಆಳವಾದ ಮಣ್ಣನ್ನು ತೆಗೆಯಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಒಂಭತ್ತು ಕೆರೆಗಳ ಹೂಳೆತ್ತುವ ಕಾಮಗಾರಿ ಮುಗಿದಿದೆ. ಪ್ರಸ್ತುತ 5 ಕೆರೆಗಳ ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್ ಮಾತನಾಡಿ, ಸರ್ಕಾರದ ವತಿಯಿಂದ ಜಿಲ್ಲೆಯಲ್ಲಿ ಸಾಕಷ್ಟು ಕೆರೆ ಹೂಳೆತ್ತುವ ಕಾಮಗಾರಿಗಳು ನಡೆದಿದ್ದರೂ ಅವು ಪರಿಣಾಮಕಾರಿಯಾಗಿ ನಡೆದಿಲ್ಲ. ಹಣವೆಲ್ಲ ಕೆರೆಯಲ್ಲಿಯೇ ಇಂಗಿಹೋಗಿದೆ. ಆದರೆ ಪೂಜ್ಯ ಹೆಗ್ಗಡೆಯವರೆ ಮಾರ್ಗದರ್ಶನದಲ್ಲಿ ಮಂಜುನಾಥಸ್ವಾಮಿ ಆಶೀರ್ವಾದದೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಪಾರದರ್ಶಕವಾಗಿ ಕೆಲಸಗಳು ನಡೆಯುತ್ತಿವೆ ಎಂದರು.
ಜನಜಾಗೃತಿ ವೇದಿಕೆ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ, ಕೆರೆಕಟ್ಟೆಗಳು ನಾಡಿನ ಜೀವನಾಡಿ. ರೈತಾಪಿ ಜನರ ಉಸಿರು. ಇವನ್ನು ಈಗಂತೂ ನಿರ್ಮಿಸಲು ಆಗದು, ಹಾಗಾಗಿ ಇರುವುದನ್ನು ಉಳಿಸಿಕೊಳ್ಳಲೇಬೇಕು. ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ಕೆರೆಯ ಹೂಳೆತ್ತಿ ಅವುಗಳಿಗೆ ಮರುಜೀವ ನೀಡಿ ಊರಿನವರಿಗೆ ವರ್ಗಾಯಿಸುವ ಮೂಲಕ ಕೆರೆಯ ಮಹತ್ವ, ಅಗತ್ಯತೆ, ಕೆರೆ ಸಂರಕ್ಷಣೆಯ ಕುರಿತ ಜಾಗೃತಿಯನ್ನು ಮೂಡಿಸುವ ಅಪೂರ್ವ ಕೆಲಸ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಬೆಳ್ಳೂಟಿ ಸಂತೋಷ್ ಮಾತನಾಡಿ, ಆನೂರು ಗ್ರಾಪಂ ವತಿಯಿಂದ ಮುಂಬರುವ 15ನೇ ಹಣಕಾಸು ಯೋಜನೆಯಲ್ಲಿ ಬೋದುಗೂರು ಗ್ರಾಮದ ಕೆರೆಯ ನೀರಿನ ಆಶ್ರಯವಾದ ರಾಜಕಾಲುವೆಗಳ ತೆರವು ಕಾರ್ಯಕ್ರಮಕ್ಕೆ ಆದ್ಯತೆ ನೀಡಲಾಗುವುದೆಂದರು.
ಕೆರೆ ಸಮಿತಿ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ವಿಶ್ವಾಸ್ ಸುರೇಶ್, ನಾಗೇಶ್, ದೊಡ್ಡಮಾರಪ್ಪ, ಕೆರೆ ಸಮಿತಿ ಸದಸ್ಯರಾದ ನಾಗೇಶ್, ವೆಂಕಟರೆಡ್ಡಿ, ರಾಮಮೂರ್ತಿ, ಶ್ರೀನಿವಾಸ್, ಮೇಲ್ವಿಚಾರಕಿ ಜ್ಯೋತಿ, ಅನಿತಾ, ಲಕ್ಷ್ಮೀ, ಆಶಾ, ರಂಗಸ್ವಾಮಿ, ಸೇವಾ ಪ್ರತಿನಿಧಿ ವೆಂಕಟಲಕ್ಷ್ಮೀ ಹಾಜರಿದ್ದರು.