Sidlaghatta : ಶಿಡ್ಲಘಟ್ಟದ ರೇಷ್ಮೆ ಇಲಾಖೆ ಮತ್ತು ಮಡಿವಾಳ ಸಂಶೋಧನಾ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಎರಡು ದಿನಗಳ ಕಾಲ ತಾಲ್ಲೂಕಿನ 25 ರೇಷ್ಮೆ ಕೃಷಿಕರಿಗೆ ತರಬೇತಿ ಕಾರ್ಯಕ್ರಮವನ್ನು ನಗರದ ಗ್ರೇನೇಜ್ ಕಟ್ಟಡದಲ್ಲಿ ಆಯೋಜಿಸಲಾಗಿತ್ತು.
ಹಿಪ್ಪುನೇರಳೆ ಮತ್ತು ರೇಷ್ಮೆ ಹುಳುಗಳ ಬೆಳೆ ರಕ್ಷಣೆ, ಬೈವೋಲೈನ್ ಸಾಕಣೆಯ ಪ್ರಯೋಜನ ಹಾಗು ಇಲಾಖೆಯಲ್ಲಿ ಲಭ್ಯವಿರುವ ಸಬ್ಸಿಡಿ ಯೋಜನೆಗಳ ಬಗ್ಗೆ ಕಾರ್ಯಕ್ರಮದಲ್ಲಿ ತಿಳಿಸಿಕೊಡಲಾಯಿತು.
ಶಿಡ್ಲಘಟ್ಟದ ಸಿ.ಎಸ್.ಟಿ.ಅರ್.ಐ ಘಟಕದ ಹಿರಿಯ ವಿಜ್ಞಾನಿ ಡಾ.ಮಹೇಶ್ ಅವರು ಗುಣಮಟ್ಟದ ರೇಷ್ಮೆ ಗೂಡುಗಳನ್ನು ಬೆಳೆಯುವ ಮೂಲಕ ಹೆಚ್ಚಿನ ದರ ಪಡೆಯಲು ಒತ್ತು ನೀಡಲು ತಿಳಿಸಿದರು. ಉತ್ತಮ ಗುಣಮಟ್ಟದ ಸೊಪ್ಪು, ಕಟ್ಟುನಿಟ್ಟಾದ ನೈರ್ಮಲ್ಯ ಪರಿಸ್ಥಿತಿಗಳು ಮತ್ತು ಹುಳುಸಾಕಣೆ ಮನೆಯೊಳಗೆ ಅಗತ್ಯವಾದ ಸೂಕ್ಷ್ಮ ಹವಾಮಾನವನ್ನು ಒದಗಿಸುವ ಮೂಲಕ ಬೈವೋಲ್ಟಿನ್ ಅನ್ನು ಬೆಳೆಸುವುದರಿಂದ ಮಾತ್ರ ಉತ್ತಮ ಗುಣಮಟ್ಟದ ಗೂಡುಗಳನ್ನು ಪಡೆಯಬಹುದು ಮತ್ತು ಹಣವನ್ನೂ ಗಳಿಸಬಹುದು ಎಂದು ತಿಳಿಸಿದರು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಪ್ಪ ಅವರು ಬೈವೋಲ್ಟಿನ್ ಸಾಕಣೆದಾರರಿಗೆ ಲಭ್ಯವಿರುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು ಮತ್ತು ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ಸಲಹೆ ನೀಡಿದರು.
ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ವಿ.ಲಕ್ಷ್ಮಣನ್ ಮಾತನಾಡಿ, ಬೈವೋಲ್ಟಿನ್ ಸಾಕಣೆಗೆ ಲಭ್ಯವಿರುವ ಹೊಸ ಸುಧಾರಿತ ತಂತ್ರಜ್ಞಾನಗಳನ್ನು ವಿವರಿಸಿದರು. ಗುಣಮಟ್ಟದ ರೇಷ್ಮೆ ಗೂಡುಗಳನ್ನು ಪಡೆಯಲು ಮತ್ತು ಉತ್ತಮ ಆದಾಯವನ್ನು ಗಳಿಸಲು ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಹಿರಿಯ ವಿಜ್ಞಾನಿ ಡಾ. ಜೆ.ಬಿ.ನರೇಂದ್ರಕುಮಾರ್ ಅವರು ಹಿಪ್ಪುನೇರಳೆ ಬೆಳೆಯುವಾಗ ಅನುಸರಿಸಬೇಕಾದ ಕೀಟ ನಿರ್ವಹಣಾ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.