ಶಿಡ್ಲಘಟ್ಟ ನಗರದ ಸಾರಿಗೆ ಬಸ್ ನಿಲ್ದಾಣ ಬಳಿ ಇರುವ ರೇಷ್ಮೆ ಮೊಟ್ಟೆ ಬಿತ್ತನೆ ಕೋಠಿಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದ್ವಿತಳಿ ರೇಷ್ಮೆಗೂಡು ಬೆಳೆಗಾರರಿಗೆ ತರಬೇತಿ, ಹಿಪ್ಪು ನೇರಳೆ ಸೊಪ್ಪಿಗೆ ತಗಲುವ ರೋಗಗಳು ಹಾಗೂ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ಕಾರ‍್ಯಾಗಾರದಲ್ಲಿ ಶಿಡ್ಲಘಟ್ಟ ರೇಷ್ಮೆಗೂಡು ಮಾರುಕಟ್ಟೆಯ ಉಪ ನಿರ್ದೇಶಕ ಶ್ರೀನಿವಾಸ್ ಮಾತನಾಡಿದರು.
ಭವಿಷ್ಯದಲ್ಲಿ ದ್ವಿತಳಿ ರೇಷ್ಮೆಗೂಡು ಮತ್ತು ನೂಲಿಗೆ ಮಾತ್ರವೇ ಮಾರುಕಟ್ಟೆಯಲ್ಲಿ ಬೇಡಿಕೆ ಇರಲಿದೆ. ಹಾಗಾಗಿ ದ್ವಿತಳಿ ರೇಷ್ಮೆಗೂಡು ಬೆಳೆಯಲು ಎಲ್ಲ ರೈತರೂ ಮುಂದಾಗಬೇಕೆಂದು ಅವರು ತಿಳಿಸಿದರು.
ನಾವು ವಿದೇಶಗಳಿಂದ ದ್ವಿತಳಿ ರೇಷ್ಮೆಗೂಡು ಹಾಗೂ ನೂಲಿನ ಆಮದನ್ನು ನಿಲ್ಲಿಸುವುದಷ್ಟೆ ಅಲ್ಲ ರಫ್ತು ಮಾಡಲು ಸಾಧ್ಯವಾದಷ್ಟು ಪ್ರಮಾಣದಲ್ಲಿ ದ್ವಿತಳಿ ರೇಷ್ಮೆಗೂಡನ್ನು ಉತ್ಪಾದಿಸಲು ಮುಂದಾಗಬೇಕೆಂದರು.
ಗುಣಮಟ್ಟದ ರೇಷ್ಮೆಗೂಡನ್ನು ಉತ್ಪಾದಿಸುವುದು ಕಷ್ಟವೇನಲ್ಲ, ರೈತರು ಇಚ್ಛಾಶಕ್ತಿಯನ್ನು ಪ್ರದರ್ಶಿಸಿದರೆ ಉತ್ಕೃಷ್ಟ ಗುಣಮಟ್ಟದ ಹಾಗೂ ಹೆಚ್ಚು ಇಳುವರಿಯ ರೇಷ್ಮೆಗೂಡನ್ನು ಬೆಳೆಯಲು ಕಷ್ಟವೇನಲ್ಲ ಎಂದು ಹೇಳಿದರು.
ಸರ್ಕಾರವು ಮಿಶ್ರತಳಿಗಿಂತಲೂ ದ್ವಿತಳಿ ರೇಷ್ಮೆಗೂಡು ಉತ್ಪಾದನೆಗೆ ಹೆಚ್ಚು ಉತ್ತೇಜನಕಾರಿ ಯೋಜನೆಗಳನ್ನು ರೂಪಿಸಿದ್ದು, ರೈತರಿಗೆ ಅಧಿಕ ಲಾಭವೂ, ಅನುಕೂಲಗಳೂ ಇವೆ. ಹಾಗಾಗಿ ದ್ವಿತಳಿ ರೇಷ್ಮೆಗೂಡನ್ನು ಬೆಳೆಯಿರಿ ಎಂದು ಮನವಿ ಮಾಡಿದರು.
ವಿಜ್ಞಾನಿ ಡಾ.ವಿನೋದ ಮಾತನಾಡಿ, ಮಣ್ಣಿನ ಫಲವತ್ತತೆ ಕಾಪಾಡದೆ ನಾವು ಉತ್ತಮ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯಲು ಆಗೊಲ್ಲ. ಸಾವಯವ ಗೊಬ್ಬರಗಳನ್ನು ಹೆಚ್ಚು ಬಳಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕಿದೆ ಎಂದರು.
ಮಾಗಿ ಉಳುಮೆ ಮಾಡುವ ಮೂಲಕ ಮಣ್ಣಿನಲ್ಲಿನ ಜೀವಕೋಶಗಳನ್ನು ಉಳಿಸುವ ಮತ್ತು ಮಾರಕವಾಗುವ ಪೀಡೆಗಳನ್ನು ನಾಶ ಮಾಡಬೇಕು, ಅದಕ್ಕೆ ಇದೀಗ ಒಳ್ಳೆಯ ಸಮಯ ಎಂದರು.
ರೇಷ್ಮೆ ಇಲಾಖೆಯ ಉಪನಿರ್ದೇಶಕ ಆಂಜನೇಯಗೌಡ, ವಿಜ್ಞಾನಿ ಡಾ.ನರೇಂದ್ರಕುಮಾರ್, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಶಿವಣ್ಣ, ಹಿತ್ತಲಹಳ್ಳಿ ಗೋಪಾಲಗೌಡ, ಎಚ್.ಕೆ.ಸುರೇಶ್, ತಾದೂರು ಮಂಜುನಾಥ್, ವೀರಾಪುರ ಮುನಿನಂಜಪ್ಪ, ಮುನಿಕೆಂಪಣ್ಣ, ಪ್ರತೀಶ್, ರೇಷ್ಮೆ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ಶಾಂತರಸ ಹಾಜರಿದ್ದರು.