Sidlaghatta : ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ ಹಾಗೂ ಕನಿಷ್ಠ ಶಿಕ್ಷಣ ಪಡೆಯದೆ ಶಾಲೆಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳುವ ಕೆಲಸವನ್ನು ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಪ್ರಾಮಾಣಿಕವಾಗಿ ಮಾಡದಿದ್ದಲ್ಲಿ ಸಮಾಜ ದಾರಿ ತಪ್ಪುತ್ತದೆ ಎಂದು ತಹಶೀಲ್ದಾರ್ ಬಿ.ಎನ್.ಸ್ವಾಮಿ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಬೇಟಿ ಬಚಾವೋ ಬೇಟಿ ಪಡಾವೊ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಪ್ರಾಪ್ತ ಮಕ್ಕಳ ಮೇಲೆ ಯಾವುದೆ ರೀತಿಯ ದೌರ್ಜನ್ಯ ದಬ್ಬಾಳಿಕೆ ನಡೆಯದಂತೆ ಕಾನೂನುಗಳಿವೆ. ಅವುಗಳನ್ನು ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳ ಪಾತ್ರ ಎಷ್ಟು ಮುಖ್ಯವೋ, ಕಾನೂನುಗಳನ್ನು ಗೌರವಿಸಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ ಸಮಾಜದಲ್ಲಿನ ಎಲ್ಲರ ಪಾತ್ರವೂ ಬಹಳ ಮುಖ್ಯ, ಆ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸುವ ಕೆಲಸ ಇನ್ನಷ್ಟು ಹೆಚ್ಚಬೇಕಿದೆ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಮಂಜುನಾಥ್ ತರಬೇತಿ ನೀಡಿ ಮಾತನಾಡಿ, ಮಕ್ಕಳ ಸಂರಕ್ಷಣೆ ಪ್ರತಿ ಹಂತದಲ್ಲೂ ಆಗಬೇಕಿದೆ. ಶಾಲೆ, ಗ್ರಾಮ ಪಂಚಾಯಿತಿ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಮಕ್ಕಳ ಸಂರಕ್ಷಣಾ ಸಮಿತಿಗಳನ್ನು ಕಡ್ಡಾಯವಾಗಿ ರಚಿಸಬೇಕು ಎಂದರು.
ಮಕ್ಕಳ ನ್ಯಾಯ ಕಾಯಿದೆ-2015, ಬಾಲ್ಯ ವಿವಾಹ ನಿಷೇದ ಕಾಯಿದೆ-2006, ಬಾಲ್ಯ ವಿವಾಹ ನಿಷೇದ ತಿದ್ದುಪಡಿ ಕಾಯಿದೆ-2016, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯಿದೆ-2012, ಮಕ್ಕಳು ಮತ್ತು ಕಿಶೋರ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯಿದೆ(1986), ಅನೈತಿಕ ಮಾನವ ಕಳ್ಳ ಸಾಗಣೆ ತಡೆ ಕಾಯಿದೆ-1956, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಾಯಿದೆ-2005, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕಿನ ಕಾಯಿದೆ 2000ರ ಬಗ್ಗೆ ಮಾಹಿತಿ ನೀಡಿದರು.
ಶಾಲಾ ಮಕ್ಕಳಲ್ಲಿ ಸುರಕ್ಷಿತ ಟಚ್ ಮತ್ತು ಅಸುರಕ್ಷಿತ ಟಚ್ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಮಕ್ಕಳ ಬಳಿ ಮಾತನಾಡುವಾಗ ಈ ಹಿಂದೆ ಇದ್ದಂತ ಮುಜುಗರ ತರುವಂತ ಪದಗಳ ಬದಲಿಗೆ ಪರ್ಯಾಯ ಪದಗಳ ಬಳಕೆ ಮಾಡಬೇಕು ಎಂದು ವಿವರಿಸಿದರು.
ಅಪ್ರಾಪ್ತ ಮಕ್ಕಳ ಮೇಲೆ ಶಾಲಾ ಅವಧಿಯಲ್ಲಿ ನಡೆಯುವ ದಬ್ಬಾಳಿಕೆಗಳಿಗೆ ನೀವೇ ಹೊಣೆ ಆಗಬೇಕಾಗುತ್ತದೆ. ಅದಕ್ಕಾಗಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು, ಮಕ್ಕಳ ಸುರಕ್ಷತೆಯ ಎಲ್ಲ ಕಾನೂನುಗಳನ್ನು ಪಾಲಿಸುವುದು ಅವರಿಗಷ್ಟೆ ಅಲ್ಲ ನಿಮಗೂ ಒಳ್ಳೆಯದು ಎಂದು ಹೇಳಿದರು.
ಪ್ರಾಥಮಿಕ, ಪ್ರೌಢಶಾಲಾ ಮುಖ್ಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು, ಸಿಡಿಪಿಒ ನವತಾಜ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಶಿಕ್ಷಣ ಇಲಾಖೆ ಭಾಸ್ಕರ್‌ಗೌಡ ಹಾಜರಿದ್ದರು.