ಶಿಡ್ಲಘಟ್ಟ ತಾಲ್ಲೂಕಿನ ಪೆಂಡ್ಲಿವಾರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿ.ಉಷಾ ಅವರು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ವಿಭಾಗದಿಂದ (2021-22 ನೇ ಸಾಲಿನ) ಆಯ್ಕೆಯಾಗಿದ್ದಾರೆ. ವಿ. ಉಷಾ ಅವರಿಗೆ “ಮಾತೆ ಸಾವಿತ್ರಿಬಾಯಿ ಪುಲೆ” ಹೆಸರಿನಲ್ಲಿ ಪ್ರಶಸ್ತಿ, 10 ಸಾವಿರ ರೂ ನಗದು ಪುರಸ್ಕಾರ ಹಾಗೂ ಅವರ ಶಾಲೆಯ ಅಭಿವೃದ್ಧಿಗೆ 50 ಸಾವಿರ ರೂ ನೀಡಲಾಗುತ್ತಿದೆ.
ವಿ. ಉಷಾ ಅವರು 2007 ಜೂನ್ 21 ರಲ್ಲಿ ತಾಲ್ಲೂಕಿನ ಪೆಂಡ್ಲಿವಾರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಮಾನ್ಯ ಕನ್ನಡ ವಿಷಯದ ಶಿಕ್ಷಕಿಯಾಗಿ ನೇಮಕಗೊಂಡವರು. ಪೆಂಡ್ಲಿವಾರಹಳ್ಳಿ ಗ್ರಾಮವು ಗುಡ್ಡಗಾಡು ಪ್ರದೇಶದಲ್ಲಿರುವ ರಸ್ತೆ ಸಾರಿಗೆ ಸಂಪರ್ಕವಿರದ ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳ ನಡುವಿನ ಗಡಿಪ್ರದೇಶದ ಗ್ರಾಮ. ಆಗ ಅಲ್ಲಿದ್ದದ್ದು ಕಾಂಪೌಂಡ್ ಇರದೆ ರಸ್ತೆಗೆ ತೆರೆದುಕೊಂಡ ಎರಡು ಹಳೆ ಕೊಠಡಿಗಳು. ಅದರೊಳಗೆ ಕನ್ನಡ ಭಾಷೆಯೂ ಸರಿಯಾಗಿ ಬಾರದ ಮಕ್ಕಳು ಒಂದೆಡೆ, ಇನ್ನೊಂದೆಡೆ ಅಷ್ಟೆ ಅಸಹಕಾರದ ಪೋಷಕರ ಸಮುದಾಯ. ಈಗ ಅದೇ ಶಾಲೆಯಲ್ಲಿ ಕಾಂಪೌಂಡ್, ಕುಡಿಯುವ ನೀರು, ಸಂಪ್, ವಿದ್ಯುತ್, ಉತ್ತಮ ಪೀಠೋಪಕರಣಗಳು, ಒಳ್ಳೆಯ ಪುಸ್ತಕಗಳನ್ನೊಳಗೊಂಡ ಗ್ರಂಥಾಲಯ, ಗುಣಮಟ್ಟದ ಕಲಿಕೋಪಕರಣಗಳು, ಬಣ್ಣದ ಚಿತ್ತಾರದ ಕೊಠಡಿಗಳು, ರುಚಿಯಾದ ಬಿಸಿಯೂಟ, ಶುದ್ಧ ಪರಿಸರ, ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಮಕ್ಕಳ ಉತ್ತಮ ಪ್ರಗತಿ, ಸಂಪೂರ್ಣ ಸಹಕಾರ ನೀಡುವ ಸಮುದಾಯ ಹೊಂದಿರುವ ಉತ್ತಮ ಶಾಲೆಯಾಗಿ ತಲೆಯೆತ್ತಿದೆ.
“ಮೂಲಕಲಿಕಾಂಶಗಳನ್ನು, ಪರಿಕಲ್ಪನೆಗಳನ್ನು, ಅನ್ವಯ ಕೌಶಲ್ಯಗಳನ್ನು, ಮೌಲ್ಯಗಳನ್ನು ಕಲಿಸಲು ಹೆಚ್ಚು ಪ್ರಾಧಾನ್ಯತೆ ನೀಡಿ ಚಟುವಟಿಕಾಧಾರಿತ ಕಲಿಕೆಗೆ ಒತ್ತು ನೀಡಿದ್ದರಿಂದ ಕೆಲವೇ ತಿಂಗಳುಗಳಲ್ಲಿ ನಮ್ಮ ಶಾಲೆಯ ಐದನೆ ತರಗತಿ ಮಕ್ಕಳು ಮೊರಾರ್ಜಿ ದೇಸಾಯಿ ಶಾಲೆಗಳ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಆಯ್ಕೆಯಾಗುವಷ್ಟು ಬೆಳೆದರು” ಎನ್ನುತ್ತಾರೆ ಶಿಕ್ಷಕಿ ಉಷಾ.
“2017-18 ರವರೆಗೂ ನಮ್ಮ ಶಾಲೆಯಲ್ಲಿ ದಾಖಲಾತಿ ಸಮಸ್ಯೆ ತಲೆದೋರಲಿಲ್ಲ. ಬಶೆಟ್ಟಿಹಳ್ಳಿಯಲ್ಲಿ ಖಾಸಗಿ ಶಾಲೆಯೊಂದು ಹುಟ್ಟಿಕೊಂಡ ಕಾರಣವಾಗಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಯಿತು. ಆಂಗ್ಲ ಮಾಧ್ಯಮದ ಮೇಲಿನ ವ್ಯಾಮೋಹದಿಂದ ಪೋಷಕರ ಬಳಿ ನಮ್ಮ ಮನವೊಲಿಕೆ ವ್ಯರ್ಥವಾಯಿತು. ಇದನ್ನು ಸವಾಲಿನಂತೆ ಸ್ವೀಕರಿಸಿ ನಮ್ಮ ಶಾಲೆಯ ಮಕ್ಕಳಿಗೂ ಕನ್ನಡ ಭಾಷೆಯ ಜೊತೆಗೆ ಇಂಗ್ಲೀಷ್ ಭಾಷೆಯನ್ನು ಇನ್ನಷ್ಟು ಚೆನ್ನಾಗಿ ಕಲಿಸಲು ನಿರ್ಧರಿಸಿದೆವು. ಇಲಾಖೆಯ ಪಠ್ಯಕ್ರಮದೊಂದಿಗೆ ಹೆಚ್ಚುವರಿ ಹೊರೆಯಾಗದಂತೆ ಫ್ಲಾಶ್ ಕಾರ್ಡ್ಸ್, ಪಜ಼ಲ್ಸ್, ಡ್ರಾಮ, ಸಂಭಾಷಣೆ, ರೈಮ್ಸ್, ಮತ್ತು ಆಟಗಳ ಮೂಲಕ ಕೇಳಿಕಲಿಯುವ, ನೋಡಿ ಕಲಿಯುವ, ಮಾಡಿಕಲಿಯುವ ಮೂರು ಪದ್ಧತಿಗಳನ್ನು ಅಳವಡಿಸಿಕೊಂಡು ಐಸಿಟಿ ಯ ಸಹಾಯದಿಂದ ಸಾಕಷ್ಟು ಪ್ರಗತಿ ಸಾಧಿಸಿದೆವು. ಇದರ ಕಲಿಕಾ ಸಾಮಗ್ರಿಗಳಿಗಾಗಿ ನಮ್ಮ ಶಾಲೆಯ ದಾನಿಗಳು ಹಿತೈಷಿಗಳೂ ಆದ ಡಾ. ಸುಧಾ ಮೇಡಮ್ ರವರು ಹಾಗೂ ಅವರ ವಾಟ್ಸಾಪ್ ಬಳಗ ಹಣಕಾಸಿನ ಸಹಾಯ ಒದಗಿಸಿದ್ದು ತುಂಬಾ ಅನುಕೂಲವಾಯಿತು. ಇವರ ಪ್ರಣತಿ ವೇದಿಕೆಯ ವತಿಯಿಂದ ಪ್ರತಿವರ್ಷ ನಮ್ಮ ಮಕ್ಕಳಿಗೆ ನೋಟ್‌ಬುಕ್, ಚಟುವಟಿಕಾ ಪುಸ್ತಕ ಮತ್ತು ಬರೆಯುವ ಸಾಮಗ್ರಿಗಳನ್ನು ಪಡೆಯುತ್ತೇವೆ” ಎಂದು ಅವರು ಹೇಳುತ್ತಾರೆ.
“ಚಿಕ್ಕಬಳ್ಳಾಪುರದ ಸಂಕಲ್ಪ ತಂಡದ ಮುಖ್ಯ ರುವಾರಿ ವಿನಯಾನಂದರನ್ನು ಅವರು ಶ್ರೇಷ್ಠ ಗುಣಮಟ್ಟದ ನಲಿಕಲಿ ಪೀಠೋಪಕರಣಗಳನ್ನು ಡೆಸ್ಕ್ ಗಳನ್ನು ಕೊಡುಗೆಯಾಗಿ ನೀಡಿ ಮಕ್ಕಳಿಗೆ ಉತ್ತಮ ಆಸನದ ವ್ಯವಸ್ಥೆ ಮಾಡಿಕೊಟ್ಟರು. ಕೊಠಡಿಗಳಿಗೆ ಸುಣ್ಣಬಣ್ಣ ಬಳಿಯಲು ಅನುದಾನಗಳ ಕೊರತೆ ಇದ್ದರಿಂದ ಬೆಂಗಳೂರಿನ ಗ್ರಾಮಾಂತರ ಸಂಸ್ಥೆಯ ಉಷಾಶೆಟ್ಟಿಯವರನ್ನು ಸಂಪರ್ಕಿಸಿ ಅವರಿಂದ ಉಚಿತವಾಗಿ ಪೈಂಟ್ಸ್ ಪಡೆದು ಗ್ರಾಮದ ಯುವಕರಿಂದಲೇ ಬಣ್ಣ ಹೊಡೆಸಿ ನಂತರ ನಾವು ಶಿಕ್ಷಕರು ಮತ್ತು ಹಿರಿಯ ವಿದ್ಯಾರ್ಥಿಗಳು ಸೇರಿ ಗೋಡೆಗಳ ಮೇಲೆ ವರ್ಲಿ ಚಿತ್ತಾರ ಮೂಡಿಸಿದೆವು.
2017 ರಲ್ಲಿ ನಮ್ಮ ಶಾಲೆಗೆ ಮೈಸೂರಿನ ಚಿಲ್ಡರ್ನ್ಸ್ ಲಿಟ್ರರರಿ ಕ್ಲಬ್ ಸ್ಥಾಪಕರೂ, ಕೆ ಎಸ್ ಓ ಯು ನ ನಿವೃತ್ತ ಪ್ರಾಧ್ಯಾಪಕರು ಆದ ಡಾ. ಪೂರ್ಣಿಮಾ ರವರು ಆಗಮಿಸಿ ರಂಗಕಲೆಯಿಂದ ಆಂಗ್ಲ ಭಾಷೆಯ ಕಲಿಕೆ, ಅಭಿನಯದ ಮೂಲಕ ವ್ಯಾಕರಣ ಎಂಬ ಕಾರ್ಯಾಗಾರ ನಡೆಸಿಕೊಟ್ಟರು. ಅವರೇ ಬರೆದು ನಿರ್ದೇಶಿಸಿದ “ಎ ಬಿಗ್ ನೋ ಟು ಡ್ರಗ್ಸ್” ಎಂಬ ನಾಟಕದಲ್ಲಿ ಮಕ್ಕಳು ಪಾತ್ರವಹಿಸಿ ಸರಾಗವಾಗಿ ಸಂಭಾಷಣೆ ಮಾಡಿ ಅದರ ವೀಡಿಯೊ ವಿದೇಶದಲ್ಲು ಮೆಚ್ಚುಗೆ ಗಳಿಸಿ ಯೂಟ್ಯೂಬ್‌ನಲ್ಲೂ ವೈರಲ್ ಆದದ್ದು ಆ ಮೂಲಕ ನಮ್ಮ ಸರ್ಕಾರಿ ಶಾಲೆಯ ಮಕ್ಕಳ ಪ್ರತಿಭೆಗೆ ಮನ್ನಣೆ ಸಿಕ್ಕಿದ್ದು ಹೆಮ್ಮೆಯ ವಿಷಯವಾಗಿದೆ. 2016-17 ರಲ್ಲಿ ‘10’ ಇದ್ದ ನಮ್ಮ ಶಾಲಾ ದಾಖಲಾತಿ ಈ ಶೈಕ್ಷಣಿಕ ಸಾಲಿನಲ್ಲಿ ‘24’ಕ್ಕೆ ಏರಿದೆ. ಅದರಲ್ಲಿ 5 ಮಕ್ಕಳು ಖಾಸಗಿ ಶಾಲೆಯಿಂದ ಬಂದವರಾಗಿದ್ದಾರೆ. ಸಾರಿಗೆಯ ಅನಾನುಕೂಲವಿದ್ದರೂ ಪಕ್ಕದೂರಿನಿಂದಲೂ ಪೋಷಕರು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ತಂದು ಸೇರಿಸಿರುವುದು ನನ್ನಲ್ಲಿ ವಿಶ್ವಾಸ ಹೆಚ್ಚಿಸಿದೆ” ಎಂದು ಅವರು ತಿಳಿಸಿದರು.
ಶೈಕ್ಷಣಿಕ ವಿಭಾಗದಷ್ಟೆ ಸಾಂಸ್ಕೃತಿಕ ವಿಭಾಗವೂ ಮುಖ್ಯವೆಂದರಿತು ಪ್ರತಿಭಾ ಕಾರಂಜಿ, ಕ್ರೀಡಾ ಸ್ಪರ್ಧೆ, ವಿಜ್ಞಾನ ವಸ್ತುಪ್ರದರ್ಶನ, ಪ್ರಯೋಗಗಳು, ಚರ್ಚೆ ಸಂವಾದ, ಪ್ರಶ್ನಿಸುವ ಮನೋಭಾವ, ರಾಷ್ಟ್ರೀಯ ಐಕ್ಯತೆ, ಮುಂತಾದ ಮೌಲ್ಯಗಳ ಬೆಳವಣಿಗೆಗಾಗಿ ಮಕ್ಕಳಿಗೆ ಕಾರ್ಯಕ್ರಮಗಳನ್ನು ಇವರು ಹಮ್ಮಿಕೊಳ್ಳುತ್ತಿರುತ್ತಾರೆ.
2019 ಡಿಸೆಂಬರ್‌ನಲ್ಲಿ ಸಂಭವಿಸಿದ್ದ ಅಪೂರ್ವ ಸೂರ್ಯಗ್ರಹಣವನ್ನು ಶಿಕ್ಷಕರು, ಮಕ್ಕಳು, ಗ್ರಾಮಸ್ಥರು ಸೇರಿ ಸೋಲಾರ್ ಫಿಲ್ಟರ್ ಕನ್ನಡಕಗಳನ್ನು ಬಳಸಿ ಸುಂದರ ಸೂರ್ಯ ಗ್ರಹಣ ವೀಕ್ಷಿಸಿದ್ದಾರೆ. ಇದಕ್ಕಾಗಿ ಬೆಂಗಳೂರಿನ ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಜಿ ಗಲಗಲಿರವರು ಅಭಿನಂದನಾ ಪತ್ರ ಮತ್ತು ಗ್ರಹಣಗಳ ಮಾಹಿತಿ ಕಿಟ್‌ನ್ನು ಕಾಣಿಕೆಯಾಗಿ ನೀಡಿದ್ದರು.
ಪರಿಸರ ಅಧ್ಯಯನವನ್ನು ನಾಲ್ಕು ಗೋಡೆಗಳ ಮಧ್ಯೆ ಮಾಡದೆ ಹತ್ತಿರದ ಸ್ಥಳಗಳಿಗೆ ಭೇಟಿ ನೀಡಿ ಜಲಸಸ್ಯಗಳು, ಕಳ್ಳಿಸಸ್ಯಗಳು, ಬಳ್ಳಿಗಳು, ಕೃಷಿ, ಏಕದಳ, ದ್ವಿದಳ ಮತ್ತು ಸಿರಿಧಾನ್ಯಗಳು ಹೀಗೆ ಮುಂತಾದ ಪರಿಕಲ್ಪನೆಗಳನ್ನು ಮೂಡಿಸುವುದಲ್ಲದೆ, ಶಾಲಾ ಆವರಣದಲ್ಲಿ ಸ್ಥಳಾವಕಾಶವಿಲ್ಲದಿದ್ದರೂ ಶಾಲೆಯ ಮುಂದೆ ರಸ್ತೆಯ ಅಕ್ಕಪಕ್ಕ ಉಸಿರಿಗಾಗಿ ಹಸಿರು ತಂಡದವರನ್ನು ಸಂಪರ್ಕಿಸಿ ಅವರ ಸಹಾಯದಿಂದ 75 ವಿಧದ ಹಣ್ಣು, ನೆರಳು, ಹೂ ಬಿಡುವ ಅಪರೂಪದ ಸಸಿಗಳನ್ನು ನೆಟ್ಟು ಅವುಗಳ ರಕ್ಷಣೆಗಾಗಿ ದಾನಿಗಳಿಂದ ತಂತಿಬೇಲಿಯನ್ನು ವ್ಯವಸ್ಥೆ ಮಾಡಿದ್ದಾರೆ.
ಕೊರೊನ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣದ ಕೊರತೆಯಾಗದಂತೆ ಸೂಕ್ತ ಎಚ್ಚರಿಕಾ ಕ್ರಮಗಳೊಂದಿಗೆ ಆನ್‌ಲೈನ್ ಪಾಠಗಳು ಮತ್ತು ಹಿರಿಯ ವಿದ್ಯಾರ್ಥಿಗಳನ್ನು ಸುಗಮಕಾರರನ್ನಾಗಿ ಮಾಡಿ ಮನೆಯಲ್ಲೆ ಕಲಿಕಾ ಪರಿಸರ ನಿರ್ಮಿಸಿದ್ದಾರೆ.
ಶಿಕ್ಷಕಿ ಉಷಾ ಅವರು ಸರ್ಕಾರಿ ನೌಕರರ ಕ್ರೀಡೆಗಳಲ್ಲಿ ಜಿಲ್ಲಾಮಟ್ಟದಲ್ಲಿ ಜಾನಪದ ನೃತ್ಯ ಮತ್ತು ಟೆನ್ನಿಕಾರ‍್ಟ್ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಹಲವಾರು ಕವನಗಳು ಹಾಗೂ ಲೇಖನಗಳನ್ನೂ ಸಹ ರಚಿಸಿದ್ದಾರೆ.