ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಆಸು ಪಾಸಿನಲ್ಲಿ ಹಾಗೂ ಜಂಗಮಕೋಟೆ ಮಾರ್ಗದಲ್ಲಿ ರಸ್ತೆ ಬದಿಯಲ್ಲಿ ವಿದ್ಯುತ್ ಕಂಬಗಳ ಆಸುಪಾಸಿನಲ್ಲಿ ಬೆಳೆದಿರುವ ಹಲವಾರು ಮರಗಳನ್ನು ಬುಡಸಮೇತ ಕಡಿಯಲಾಗಿದೆ. ರಸ್ತೆ ಅಗಲೀಕರಣದಿಂದ ಹಿಂದೆ ಇದ್ದ ದೊಡ್ಡ ದೂಡ್ಡ ಮರಗಳು ಮಾಯವಾದವು. ಅದರ ಕೊರತೆ ನೀಗಿಸುವೆವು ಎನ್ನುತ್ತಾ ಅರಣ್ಯ ಇಲಾಖೆಯವರು ವರ್ಷಂಪ್ರತಿ ರಸ್ತೆ ಬದಿ ಮರಗಿಡಗಳನ್ನು ನೆಡುತ್ತಿದ್ದರೆ, ಅವುಗಳಲ್ಲಿ ಉಳಿದುಕೊಂಡ ಮರಗಳು ಬೆಸ್ಕಾಂ ನವರ ಕೊಡಲಿಗೆ ಬಲಿಯಾಗುತ್ತಿವೆ.
ಎಲ್ಲೆಡೆ ಮರಬೆಳೆಸಿ, ಗಿಡ ನೆಡಿ, ಆಮ್ಲಜನಕದ ಆಗರವನ್ನಾಗಿಸಲು ಹಸಿರು ಪರಿಸರ ರೂಪಿಸಲು ಆಂದೋಲನ ನಡೆಯುತ್ತಿದ್ದರೆ, ತಾಲ್ಲೂಕಿನಲ್ಲಿ ಬೆಸ್ಕಾಂ ಅಧಿಕಾರಿಗಳು ಬೆಳೆದು ನಿಂತ ಮರಗಿಡಗಳ ಮಾರಣ ಹೋಮ ನಡೆಸಿದ್ದಾರೆ. ತಾಲ್ಲೂಕಿನ ಪರಿಸರವಾದಿಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಮರಗಳನ್ನು ಕಡಿದ ಬೆಸ್ಕಾಂ ಇಲಾಖೆಯವರಿಗೆ ದಂಡ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.
“ಈ ಅಧಿಕಾರಿಗಳ ನಿರ್ಲಕ್ಷ್ಯತೆ ಮತ್ತು ಪರಿಸರ ವಿರೋಧಿ ಮನಸ್ಥಿತಿಯನ್ನು ಖಂಡಿಸಿ, ಬೆಸ್ಕಾಂ ಅಧಿಕಾರಿಗಳು, ಅರಣ್ಯ ಇಲಾಖೆಯ ಎ.ಸಿ.ಎಫ್, ಇಬ್ಬರು ಆರ್.ಎಫ್.ಒ ಗಳ ವಿರುದ್ಧ ಮುಖ್ಯಮಂತ್ರಿಗಳಿಗೆ ದೂರು ನೀಡಲಿದ್ದೇನೆ. ಸುಮಾರು ಆರೇಳು ವರ್ಷಗಳಿಂದ ರಸ್ತೆ ಬದಿಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟಿರುವುದಲ್ಲದೆ, ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಹಾಕಿಸಿ ಅವನ್ನು ಕಾಪಾಡಿದ್ದೇವೆ. ಚೆನ್ನಾಗಿ ಬೆಳೆದು ನಿಂತ ಮರಗಳನ್ನು ಏಕಾಏಕಿ ಬಂದು ಬುಡಕ್ಕೆ ಕೊಡಲಿ ಹಾಕಿದ್ದಾರೆ. ನಮಗೆ ಅತೀವ ಸಂಕಟವಾಗುತ್ತಿದೆ. ಗಿಡವನ್ನು ಬೆಳೆಸುವ ಕಷ್ಟ ಈ ಅಧಿಕಾರಿಗಳಿಗೆ ತಿಳಿಯದಿದ್ದರೆ, ಅವರು ಮಾನವತ್ವವನ್ನೇ ಕಳೆದುಕೊಂಡಂತೆಯೇ ಸರಿ. ಈ ಬಗ್ಗೆ ಈ ಹಿಂದೆಯೂ ಹಲವಾರು ಬಾರಿ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಕ್ರಮ ಕೈಗೊಂಡಿಲ್ಲ. ಬೆಸ್ಕಾಂ ನವರು ಇಲ್ಲಿ ಮರಗಳನ್ನು ಕಡಿಯುವುದು ಒಂದು ಪ್ರವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಪ್ರಕೃತಿಯನ್ನು ಕಾಪಾಡುವ ಪ್ರಾಮಾಣಿಕ ಪ್ರಯತ್ನ ವಿಫಲವಾಗುತ್ತಿದೆ” ಎಂದು ಅವರು ಹೇಳಿದರು.
ಈ ಅಧಿಕಾರಿಗಳು ಗಿಡಮರಗಳಿಗೆ ಕೊಡಲಿ ಹಾಕುವುದರ ಮೂಲಕ ಗಿಡಗಳನ್ನು ಬೆಳೆಸುವ ಆಸಕ್ತಿಯನ್ನು ಸಹ ಕೊಲ್ಲುತ್ತಿದ್ದಾರೆ. ಎಷ್ಟು ಕಷ್ಟಪಟ್ಟು ಬೆಳೆಸಿದರೇನು ಫಲ, ರಾತ್ರೋರಾತ್ರಿ ಬಂದು ಬುಡಕ್ಕೆ ಕೊಡಲಿ ಹಾಕಿ ಹೋಗುತ್ತಾರೆ. ಏತಕ್ಕಾಗಿ ಗಿಡ ಬೆಳೆಸಬೇಕು ಎಂದು ನಾವುಗಳು ರೋಸಿಹೋಗುವಂತೆ ಮಾಡುತ್ತಿದ್ದಾರೆ. ಗಿಡಗಳನ್ನು ಕತ್ತರಿಸಲು ಇವರಿಗೆ ಅಧಿಕಾರವನ್ನು ಕೊಟ್ಟವರು ಯಾರು ಎಂದು ಅವರು ಬೇಸರದಿಂದ ಪ್ರಶ್ನಿಸುತ್ತಾರೆ.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi