Sidlaghatta : ಟ್ರಾನ್ಸ್ ಫಾರ್ಮರ್ ಸುಟ್ಟು ಹೋದಾಗ ಅದನ್ನ ಪುನಃ ಹಾಕುವುದಕ್ಕೆ ವಾರಗಟ್ಟಲೆ ಸಮಯಾಗುತ್ತದೆ ಮತ್ತು ಲೈನ್ ಮ್ಯಾನ್ ಗಳು 3-4 ಸಾವಿರ ಲಂಚವಿಲ್ಲದೆ ಟ್ರಾನ್ಸ್ ಫಾರ್ಮರ್ ಹಾಕುವುದಿಲ್ಲ. ಇದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಎಂದು ರೈತ ಮುಖಂಡ ರವಿಪ್ರಕಾಶ್ ಆರೋಪಿಸಿದರು.
ನಗರದ ಬೆಸ್ಕಾಂ ಕಚೇರಿಯಲ್ಲಿ ಗ್ರಾಹಕರ ಕುಂದು ಕೊರತೆ ಸಂವಾದ ಸಭೆ ಮತ್ತು ವಿದ್ಯುತ್ ಸುರಕ್ಷತೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರದಿಂದ ಉಚಿತವಾಗಿ ಟ್ರಾನ್ಸ್ ಫಾರ್ಮರ್ ಬಂದರೂ ಅದನ್ನ ರೈತರಿಗೆ ಉಚಿತವಾಗಿ ನೀಡದೇ ರೈತರ ಬಳಿ ಹಣ ವಸೂಲಿ ಮಾಡಿ ಒಂದು ವಾರಕ್ಕೆ ಟ್ರಾನ್ಸ್ ಫಾರ್ಮರ್ ಹಾಕಲಾಗುತ್ತದೆ. ರೈತರ ಬಳಿ ಕೆಲವು ಲೈನ್ ಮ್ಯಾನ್ ಗಳು ಹಣ ವಸೂಲಿಗೆ ಇಳಿದಿದ್ದಾರೆ. ಈ ವಿಚಾರ ಅಧಿಕಾರಿಗಳ ಗಮನಕ್ಕೂ ಬಂದಿರುತ್ತದೆ. ಆದರೂ ಸಹ ಯಾವುದೇ ಕ್ರಮ ಕೈಗೊಳದೇ ಇರುವುದು ಖಂಡನೀಯ ಎಂದರು.
ರೈತ ದೂರು ನೀಡಿದ ಎರಡೂ ಮೂರು ದಿನಗಳಲ್ಲಿ ಏಕೆ ನೀವು ಟ್ರಾನ್ಸ್ ಫಾರ್ಮರ್ ಹಾಕುವುದಿಲ್ಲ. ಒಂದು ವಾರ ನೀರಿಲ್ಲದಿದ್ದರೆ ಬೆಳೆಗಳ ಪರಿಸ್ಥಿತಿ ಏನಾಗಬಹುದು ಎಂಬುದು ನಿಮಗೆ ತಿಳಿದಿದೆಯೇ ಎಂದು ಪ್ರಶ್ನಿಸಿದರು.
ರೈತರೊಂದಿಗೆ ಚರ್ಚಿಸಿದ ಕಾರ್ಯನಿರ್ವಾಹಕ ಎಂಜಿನಿಯರ್ ವೆಂಕಟೇಶಪ್ಪ, ಇನ್ನು ಮುಂದೆ ಈ ರೀತಿ ಆಗುವುದಿಲ್ಲ. ಒಂದು ವೇಳೆ ರೈತರ ಬಳಿ ಟ್ರಾನ್ಸ್ ಫಾರ್ಮರ್ ಬದಲಾಯಿಸುವುದಕ್ಕೆ ಯಾರಾದರೂ ಹಣ ಕೊಡಬೇಕೆಂದು ಕೇಳಿದಾಗ ನನಗೆ ದೂರು ನೀಡಿ. ನನ್ನ ಗಮನಕ್ಕೆ ಬಂದ ತಕ್ಷಣ ನಾನು ಪರಿಶೀಲಿಸಿ ಕಾನೂನು ರೀತಿಯಲ್ಲಿ ಕ್ರಮವಹಿಸುತ್ತೇನೆ ಎಂದರು.
ಒರಿಸ್ಸಾದ ತಾಲ್ಸೇರ್ ರಿಂದ ಎರಡು ಲೈನ್ ಮೂಲಕ 400 ಕೆಬಿ ವ್ಯಾಟ್ಸ್ ಸಾಮರ್ಥ್ಯವುಳ್ಳ ಲೈನ್ ಕೋಲಾರದ ಹರಹಳ್ಳಿ ಪವರ್ ಗ್ರಿಡ್ ಬರುತ್ತದೆ. ನಂತರ ಹರಹಳ್ಳಿಯಲ್ಲಿ 220 ವ್ಯಾಟ್ಸ್ ಪರಿವರ್ತನೆ ಮಾಡಿ ಚಿಂತಾಮಣಿ ಪವರ್ ಸ್ಟೇಷನ್ ನಿಂದ ಶಿಡ್ಲಘಟ್ಟಕ್ಕೆ 66 ವ್ಯಾಟ್ಸ್ ಗೆ ಸಾಮರ್ಥ್ಯಕ್ಕೆ ಪರಿವರ್ತನೆ ಮಾಡಿ ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಿದರು.
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಪ್ರಭು, ರೈತ ಮುಖಂಡ ಮಾರುತಿ, ಚಿಂತಡಪಿ ಮುನಿರಾಜ್, ರೈತರು ಮತ್ತು ಗ್ರಾಹಕರು ಹಾಗೂ ಬೆಸ್ಕಾಂ ಸಿಬ್ಬಂದಿ ಹಾಜರಿದ್ದರು.