ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದ ವತಿಯಿಂದ ಸರಳವಾಗಿ ಆಚರಿಸಿದ ಬಸವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿದರು.
ಸಮಾಜದ ತಾರತಮ್ಯ, ಅನಿಷ್ಟತೆಗಳ ವಿರುದ್ಧ ಬಸವಣ್ಣನವರು ನಡೆಸಿದ ಹೋರಾಟ ಸ್ಮರಣೀಯ. ಭೌತಿಕ ಸುಖಕ್ಕಿಂತ ಸಮೂಹದ ಸುಖ ಬಯಸಿದ ಭುವನದ ಬೆಳಕು ಬಸವಣ್ಣನವರ ವಿವೇಕವಾಣಿ ಈಗಿನ ಕೊರೊನಾ ಸಂಕಷ್ಟದ ಸಮಯದಲ್ಲಿ ಅತ್ಯಂತ ಪ್ರಸ್ತುತವಾಗಿದೆ. ಸ್ವಾರ್ಥದ ಬೆನ್ನೇರಿ ಹೋಗುವವರಿಗೆ ನಿಸ್ವಾರ್ಥ ಮತ್ತು ತ್ಯಾಗದ ಮಹಿಮೆಯನ್ನು ತಿಳಿಸಿಕೊಟ್ಟಿರುವ ಅವರ ಬರಹ ಮತ್ತು ಬದುಕು ನಮಗೆಲ್ಲಾ ಪ್ರೇರಣಾದಾಯಕ ಎಂದು ಅವರು ತಿಳಿಸಿದರು.
‘ಮೃತ್ಯುಲೋಕವೆಂಬುದು ಕರ್ತಾರನ ಕಮ್ಮಟವಯ್ಯ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು. ಮೃತ್ಯುಲೋಕ, ದೇವಲೋಕ ಬೇರಿಲ್ಲ. ಸತ್ಯವ ನುಡಿವುದು ದೇವಲೋಕ, ಮಿಥ್ಯವ ನುಡಿವುದೇ ಮೃತ್ಯು ಲೋಕ, ಇದು ಬಸವಣ್ಣನವರ ಬದುಕಿನ ಸಂದೇಶವಾಗಿತ್ತು ನುಡಿದಂತೆ ನಡೆದ, ಬರೆದಂತೆ ಬದುಕಿದ ಬಸವೇಶ್ವರರ ಬದುಕು ಬರಹ ನಮಗೆ ಪಾಠವಾಗಿದೆ. ಪ್ರಸ್ತುತ ಸಂಕಷ್ಟದ ದಿನಗಳಲ್ಲಿ ಅವರ ವಚನಗಳು ದಾರಿದೀಪದಂತಿವೆ ಎಂದರು.
ಶಿರಸ್ತೆದಾರ್ ಮಂಜುನಾಥ್, ತಾಲ್ಲೂಕು ಕಚೇರಿಯ ಸಿಬ್ಬಂದಿ ಹಾಜರಿದ್ದರು.