Sidlaghatta : ವಸತಿ ಗೃಹಗಳ ನಡುವೆ ಯಾವುದೆ ಕಾರಣಕ್ಕೂ ಬಾರ್ ಮತ್ತು ರೆಸ್ಟೋರೆಂಟ್(ಸಿಎಲ್-7) ತೆರೆಯಲು ಅವಕಾಶ ಮಾಡಿಕೊಡಬಾರದು, ಎನ್.ಒ.ಸಿ ಕೊಡಬಾರದು ಎಂದು ಜಂಗಮಕೋಟೆ ಹೋಬಳಿಯ ದೇವಗಾನಹಳ್ಳಿಯ ಕನಕನಗರ ವಾಸಿಗಳು ಹೊಸಪೇಟೆ ಗ್ರಾಮ ಪಂಚಾಯಿತಿಗೆ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ದೇವಗಾನಹಳ್ಳಿ ಬಳಿ ಇರುವ ಕನಕನಗರ ಬಡಾವಣೆಯಲ್ಲಿ ಬೃಹತ್ ಕಟ್ಟಡವೊಂದು ನಿರ್ಮಾಣವಾಗಿದ್ದು ಅಲ್ಲಿ ಬಾರ್ ಮತ್ತು ರೆಸ್ಟೋರೆಂಟ್(ಸಿ.ಎಲ್-7) ಹಾಗೂ ಲಾಡ್ಜ್ ತೆರೆಯುವ ಯತ್ನಗಳು ನಡೆದಿವೆ ಎನ್ನುವುದು ಸ್ಥಳೀಯರ ಅನುಮಾನ ವ್ಯಕ್ತಪಡಿಸಿದ್ದಾರೆ.
ಹತ್ತು ಹಲವು ನಿಯಮಗಳನ್ನು ಉಲ್ಲಂಘಿಸಿ ವಸತಿ ಪ್ರದೇಶದ ನಡುವೆ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಯಾವುದೆ ಕಾರಣಕ್ಕೂ ಅಬಕಾರಿ ಇಲಾಖೆ, ಪಂಚಾಯಿತಿ ಅಥವಾ ಇನ್ನಾವುದೆ ಇಲಾಖೆಯವರಾಗಲಿ ಅನುಮತಿಯನ್ನು ನೀಡಬಾರದೆಂದು ಸ್ಥಳೀಯರು ಆಗ್ರಹಿಸಿದರು.
ಬಾರ್ ಆರಂಭಕ್ಕೆ ಸ್ಥಳೀಯರ ಪ್ರತಿರೋಧಕ್ಕೆ ರೈತ ಸಂಘವು ಬೆಂಬಲ ವ್ಯಕ್ತಪಡಿಸಿದ್ದು ಸ್ಥಳೀಯರು ಹಾಗೂ ರೈತ ಸಂಘದ ಸದಸ್ಯರು ಹೊಸಪೇಟೆ ಗ್ರಾಮ ಪಂಚಾಯಿತಿ ಕಚೇರಿ ಬಳಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಮನವಿಯನ್ನು ಸಲ್ಲಿಸಿದರು.
ಉದ್ದೇಶಿತ ಬಾರ್ ಮತ್ತು ರೆಸ್ಟೋರೆಂಟ್ ಕಟ್ಟಡ ನಿರ್ಮಾಣವಾಗುತ್ತಿರುವ ಜಾಗವು ವಸತಿ ಪ್ರದೇಶವಾಗಿದ್ದು ಯಾವುದೆ ಕಾರಣಕ್ಕೂ ವಸತಿ ಪ್ರದೇಶದಲ್ಲಿ ಬಾರ್ ಆರಂಭಿಸಲು ಪಂಚಾಯಿತಿಯಿಂದ ಎನ್.ಒ.ಸಿ ಪತ್ರ ನೀಡಬಾರದು ಎಂದು ಮನವಿ ಸಲ್ಲಿಸಿದರು.
ನಿಯಮಗಳನ್ನು ಉಲ್ಲಂಘಿಸಿ ಆರಂಭಿಸಲು ಉದ್ದೇಶಿಸಿರುವ ಬಾರ್‌ಗೆ ಒಂದು ವೇಳೆ ಎನ್.ಒ.ಸಿ ನೀಡಿದರೆ ಪ್ರತಿಭಟನೆಯನ್ನು ಮಾಡಬೇಕಾದೀತೆಂದು ಎಚ್ಚರಿಸಿದರು.
ಹೊಸಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್‌ಗೌಡ, ಪಿಡಿಒ ಯಮುನಾರಾಣಿ ಅವರು ಮನವಿ ಸ್ವೀಕರಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಸುಂಡ್ರಹಳ್ಳಿ ಬೀರಪ್ಪ, ಬುಸ್ನಹಳ್ಳಿ ದೇವರಾಜ್, ಕನಕನಗರ ವಾಸಿಗಳಾದ ವೆಂಕಟರೋಣಸ್ವಾಮಿ, ಅಶೋಕ್, ಕಾರ್ತಿಕ್, ರುಕ್ಮಣಿ, ಲಕ್ಷ್ಮಿ ಸೇರಿದಂತೆ ಸ್ಥಳೀಯರು ಹಾಜರಿದ್ದರು.