Sidlaghatta : ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ (Jangamakote Hobli) ಬಳುವನಹಳ್ಳಿಯಲ್ಲಿ (Baluvanahgalli) 57ನೇ ವರ್ಷದ ಶ್ರೀರಾಮ ಕಲ್ಯಾಣೋತ್ಸವ ಹಾಗೂ ರಥೋತ್ಸವ (Sri Rama Kalyanotsava, Rathotsava) ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.
ಬಳುವನಹಳ್ಳಿಯಲ್ಲಿರುವ ಸೀತೆ ರಾಮ ಲಕ್ಷ್ಮಣ ಮತ್ತು ಆಂಜನೇಯಸ್ವಾಮಿ ದೇವಾಲಯದಲ್ಲಿ ಕಳೆದ 56 ವರ್ಷಗಳಿಂದಲೂ ಶ್ರೀರಾಮ ಸಪ್ತಾಹವನ್ನು ಗ್ರಾಮಸ್ಥರು ಹಾಗೂ ನೆರೆ ಹೊರೆಯ ಗ್ರಾಮಸ್ಥರು ಸೇರಿ ನಡೆಸಿಕೊಂಡು ಬರಲಾಗುತ್ತಿತ್ತು. ಅಂತೆಯೆ ಈ ವರ್ಷವೂ ವಿಜೃಂಭಣೆಯಿಂದ ಶ್ರೀರಾಮನ ಸಪ್ತಾಹದ 57ನೇ ವರ್ಷದ ಶ್ರೀರಾಮ ಕಲ್ಯಾಣೋತ್ಸವ ಮತ್ತು ರಥೋತ್ಸವವನ್ನು ಎಲ್ಲರೂ ಸೇರಿ ವಿಜೃಂಭಣೆಯಿಂದಲೂ ಶ್ರದ್ಧಾ ಭಕ್ತಿಯಿಂದಲೂ ನೆರವೇರಿಸಲಾಯಿತು.
ಶ್ರೀರಾಮ ಸೀತೆ ಲಕ್ಷ್ಮಣನ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಬಂದ ಎಲ್ಲ ಭಕ್ತರಿಗೂ ರಾಗಿ ಮುದ್ದೆ ಹೆಸರು ಕಾಳು ಸಾರು, ಪಾಯಸ ಮಾಡಿ ಬಡಿಸಲಾಯಿತು.
ಎಬಿಡಿ ಟ್ರಸ್ಟ್‍ನ ಮುಖ್ಯಸ್ಥ ರಾಜೀವ್‍ಗೌಡ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಭೀಮೇಶ್, ದೇವಾಲಯದ ಟ್ರಸ್ಟ್ ನ ಪದಾಧಿಕಾರಿಗಳು, ಭಕ್ತರು, ಗ್ರಾಮಸ್ಥರು ಭಾಗವಹಿಸಿದ್ದರು.